ಬೆಂಗಳೂರು: ಭಾರತ ತಂಡದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ(Prasidh Krishna) ಕರ್ನಾಟಕ ರಣಜಿ(Ranji Trophy) ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಪ್ರಸಿದ್ಧ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ದ್ವಿತೀಯ ಟೆಸ್ಟ್ನಿಂದ ಕೈಬಿಡಲಾಗಿತ್ತು.
ಬೌಲಿಂಗ್ ಲಯ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರು ರಣಜಿ ತಂಡ ಸೇರಿದ್ದಾರೆ. ಜನವರಿ 12ರಿಂದ 15ರವರೆಗೆ ಅಹಮದಾಬಾದ್‌ನಲ್ಲಿ ಗುಜರಾತ್ ವಿರುದ್ಧ ನಡೆಯುವ ಪಂದ್ಯದಲ್ಲಿ ಪ್ರಸಿದ್ಧ್ ಕಣಕ್ಕಿಳಿಯಲಿದ್ದಾರೆ. ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡದಲ್ಲಿ ಆಡಿದ್ದ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಅವರು ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ‘ಎ’ ತಂಡಕ್ಕೆ ಆಯ್ಕೆಯಾದ ಕಾರಣ ಅವರು ಈ ಪಂದ್ಯಕ್ಕೆ ಲಭ್ಯರಿಲ್ಲ.
ಗೆಲುವಿನ ಆರಂಭ ಪಡೆದ ಕರ್ನಾಟಕ
ಕರ್ನಾಟಕ ತಂಡ 2023-24ನೇ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ. ಹುಬ್ಬಳ್ಳಿಯಲ್ಲಿ ನಡೆದ ಎಲೈಟ್ “ಸಿ’ ವಿಭಾಗದ ಪಂದ್ಯದಲ್ಲಿ ಪಂಜಾಬ್‌ಗ 7 ವಿಕೆಟ್‌ಗಳ ಸೋಲುಣಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. 362 ರನ್ನುಗಳ ಹಿನ್ನಡೆಗೆ ಸಿಲುಕಿದ ಪಂಜಾಬ್, 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 238 ರನ್ ಗಳಿಸಿ ಹೋರಾಟವೊಂದನ್ನು ಜಾರಿಯಲ್ಲಿರಿಸಿತ್ತು. ಸೋಮವಾರ ಬ್ಯಾಟಿಂಗ್ ಮುಂದುವರಿಸಿ 413ಕ್ಕೆ ಆಲೌಟ್ ಆಯಿತು. 52 ರನ್ನುಗಳ ಸಣ್ಣ ಗುರಿ ಪಡೆದ ಕರ್ನಾಟಕ 3 ವಿಕೆಟ್ ನಷ್ಟಕ್ಕೆ ಈ ಮೊತ್ತವನ್ನು ಬಾರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾದಲ್ಲಿ ಕನ್ನಡದ ಕಂಪು ಸಾರಿದ ಕೆಎಲ್ ರಾಹುಲ್-ಪ್ರಸಿದ್ಧ್ ಕೃಷ್ಣ
ಚೇಸಿಂಗ್ ವೇಳೆ ಕರ್ನಾಟನಾಯಕ ಮಾಯಾಂಕ್ ಅಗರ್ವಾಲ್ ಮತ್ತು ನಿಕಿನ್ ಜೋಸ್ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಆರ್. ಸಮರ್ಥ್ 21 ರನ್ ಮಾಡಿ ಔಟಾದರು. ಎಸ್. ಶರತ್ (ಔಟಾಗದೆ 21) ಮತ್ತು ಮನೀಷ್ ಪಾಂಡೆ (ಔಟಾಗದೆ 10) ಸೇರಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರ್
ಪಂಜಾಬ್-152 ಮತ್ತು 413 (ಪ್ರಭ್‌ಸಿಮ್ರಾನ್ 100, ಅಭಿಷೇಕ್ 91, ಗೀತಾಂಶ್ 43, ಮಾರ್ಕಂಡೆ 36, ಅರ್ಷದೀಪ್ 36, ಮನ್‌ದೀಪ್ 27, ವಧೇರ 26, ಬಲತೇಜ್ ಅಜೇಯ 22, ಶುಭಾಂಗ್ 89ಕ್ಕೆ 3, ರೋಹಿತ್ 101ಕ್ಕೆ 3, ವಿದ್ವತ್ 59ಕ್ಕೆ 2, ಸಮರ್ಥ್ 17ಕ್ಕೆ 1, ವೈಶಾಖ್ 93ಕ್ಕೆ 1). ಕರ್ನಾಟಕ-8 ವಿಕೆಟಿಗೆ 514 ಡಿಕ್ಲೇರ್, 3 ವಿಕೆಟಿಗೆ 52 (ಸಮರ್ಥ್ 21, ಶರತ್ ಔಟಾಗದೆ 21, ಪ್ರೇರಿತ್ ದತ್ತ 10ಕ್ಕೆ 2, ಬಲತೇಜ್ 12ಕ್ಕೆ 1).