Site icon Vistara News

Varun Kumar: ಪೋಕ್ಸೋ ಪ್ರಕರಣ; ಎಫ್‌ಐಎಚ್‌ ಹಾಕಿ ಲೀಗ್‌ನಿಂದ ಹಿಂದೆ ಸರಿದ ವರುಣ್‌

India hockey player Varun Kumar booked under POCSO act

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಭಾರತದ ಒಲಿಂಪಿಕ್​ ಹಾಕಿ ತಾರೆ ವರುಣ್‌ ಕುಮಾರ್‌(Varun Kumar) ಭುವನೇಶ್ವರದಲ್ಲಿ(Bhubaneswar) ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌(FIH Pro League) ಹಾಕಿ ಕೂಟದಿಂದ ಹಿಂದೆ ಸರಿದಿದ್ದಾರೆ. ಕಾನೂನು ಹೋರಾಟ ಮಾಡಲು ತಾನು ಸಿದ್ಧ ಎಂದು ಹೇಳಿದ್ದಾರೆ.

ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಆರೋಪ ಹೊತ್ತಿರುವ ವರುಣ್​ ಅವರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಈ ಆರೋಪವನ್ನು ಮಾಡಲಾಗಿದೆ. ಇದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲು ಅಲೋಚಿಸಬೇಕಾಗಿದೆ ಎಂದು ಹೇಳಿದ್ದಾರೆ. ಆರೋಪದ ವಿರುದ್ಧ ಹೋರಾಡಲು ವರುಣ್​ಗೆ ಹಾಕಿ ಇಂಡಿಯಾವು ತುರ್ತು ರಜೆ ತೆಗೆದುಕೊಳ್ಳಲು ಅನುಮತಿ ನೀಡಿದೆ. ವರುಣ್​ ಕೂಡ ಎಫ್‌ಐಎಚ್‌ ಪ್ರೊ ಲೀಗ್​ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಮೂರು ದಿನಗಳ ಹಿಂದಷ್ಟೇ ವರುಣ್ ಕುಮಾರ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಯುವತಿ ಹಾಗೂ ವರುಣ್‌ ನಡುವೆ ನಡೆದಿರುವ ಮೊಬೈಲ್‌ ಸಂಭಾಷಣೆ, ಸಂದೇಶಗಳು ಹಾಗೂ ಧ್ವನಿ ಮುದ್ರಿಕೆಗಳೂ ಸೇರಿದಂತೆ ಇತರೆ ವಿವರಗಳ ಸಾಕ್ಷ್ಯಾಧಾರಗಳನ್ನು ತನಿಖೆ ದೃಷ್ಟಿಯಿಂದ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಬುಧವಾರ ತಿಳಿಸಿತ್ತು.

ಇದನ್ನೂ ಓದಿ ಹಾಕಿ ಆಟಗಾರ ವರುಣ್ ವಿರುದ್ಧ ‘ಪೋಕ್ಸೊ’ ಪ್ರಕರಣ: ಡಿಜಿಟಲ್‌ ಸಾಕ್ಷ್ಯಾಧಾರ ಸಂಗ್ರಹ

ಅಪ್ರಾಪ್ತೆಯಾಗಿದ್ದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ ವರುಣ್ ಕುಮಾರ್ ಪರಿಚಯವಾಗಿತ್ತು. 17 ವರ್ಷದವಳಾಗಿದ್ದ ದೂರುದಾರಳನ್ನ ಪ್ರೀತಿಸುವುದಾಗಿ ನಂಬಿಸಿದ್ದ ವರಣ್​, ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತೇನೆ ಅಲ್ಲಿಯವರೆಗೂ ಪ್ರೇಮಿಗಳಾಗಿ ಇರೋಣ’ ಎಂದು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ. ಒಂದು ವರ್ಷದ ಹಿಂದೆ ನನ್ನ ತಂದೆ ಮೃತಪಟ್ಟಾಗ ಮನೆ ಬಳಿ ಬಂದು ಸಾಂತ್ವನ ಹೇಳಿ ಹೋಗಿದ್ದ. ಆದರೆ ಈಗ ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಳು.

ಫೆಬ್ರವರಿ 10ರಿಂದ ಎಫ್‌ಐಎಚ್ ಪ್ರೊ ಲೀಗ್ ಹಾಕಿ(FIH Pro League) ಟೂರ್ನಿ ಆರಂಭಗೊಳ್ಳಲಿದೆ. ಸ್ಪೇನ್‌ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ನಾಳೆ ನಡೆಯಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡ ಈ ಬಾರಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದೆ. ಇದಕ್ಕಾಗಿ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ. ತಂಡದ ಎಲ್ಲ ನೂನ್ಯತೆಗಳನ್ನು ಸರಿಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಮೊದಲ ಲೆಗ್(leg)​​ ಭುವನೇಶ್ವರ ಫೆ.10ರಿಂದ ಫೆ.16ರವರೆಗೆ ಮತ್ತು ಲೆಗ್‌ ಫೆ.19ರಿಂದ 25ರವರೆಗೆ ರೂರ್ಕೆಲಾದಲ್ಲಿ ನಡೆಯಲಿದೆ. ಎರಡೂ ಲೆಗ್​ಗಳಲ್ಲಿ ಭಾರತವು ಐರ್ಲೆಂಡ್, ನೆದರ್ಲೆಂಡ್ಸ್, ಸ್ಪೇನ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. 

ಭಾರತ ಹಾಕಿ ತಂಡ


ಗೋಲ್‌ ಕೀಪರ್ಸ್‌: ಪಿ.ಆರ್.ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.

ಡಿಫೆಂಡರ್ಸ್‌: ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ಜರ್ಮನ್‌ಪ್ರೀತ್ ಸಿಂಗ್‌, ಸುಮಿತ್‌, ಜುಗರಾಜ್ ಸಿಂಗ್, ಅಮಿತ್‌ ರೋಹಿದಾಸ್‌, ಸಂಜಯ್‌, ವಿಷ್ಣುಕಾಂತ್ ಸಿಂಗ್.

ಮಿಡ್‌ಫೀಲ್ಡರ್ಸ್‌: ಹಾರ್ದಿಕ್ ಸಿಂಗ್‌ (ಉಪನಾಯಕ), ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ಶಂಷೇರ್‌ ಸಿಂಗ್‌, ರಾಜಕುಮಾರ್ ಪಾಲ್, ರವಿಚಂದ್ರ ಸಿಂಗ್ ಮೊಯಿರಂಗ್ಧೆಮ್.

ಫಾರ್ವರ್ಡ್ಸ್‌: ಲಲಿತ್‌ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್, ಗುರ್ಜಂತ್‌ ಸಿಂಗ್‌, ಸುಖಜೀತ್ ಸಿಂಗ್, ಅಭಿಷೇಕ್, ಅಕ್ಷದೀಪ್ ಸಿಂಗ್, ಅರಿಜಿತ್ ಸಿಂಗ್ ಹುಂಡಲ್.

Exit mobile version