ದುಬೈ: ಅಫಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಅವರು ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ‘ದಿ ಹಂಡ್ರೆಡ್’ ಕ್ರಿಕೆಟ್ ಲೀಗ್ನಲ್ಲಿ 2 ವಿಕೆಟ್ ಕಬಳಿಸುವುದರೊಂದಿಗೆ ರಶೀದ್ ಖಾನ್ ಎಲ್ಲ ಮಾದರಿಯ ಟಿ20 ಕ್ರಿಕೆಟ್ನಲ್ಲಿ 600 ವಿಕೆಟ್(Rashid khan 600 wickets) ಪೂರ್ತಿಗೊಳಿಸಿದ ವಿಶ್ವದ ಮೊದಲ ಸ್ಪಿನ್ನರ್ ಹಾಗೂ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ 600 ವಿಕೆಟ್ ಪೂರ್ತಿಗೊಳಿಸಿದ್ದ ವಿಶ್ವ ದಾಖಲೆಯನ್ನು ಮೊದಲ ನಿರ್ಮಿಸಿದ್ದು ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಡ್ವೇನ್ ಬ್ರಾವೊ. ಇದೀಗ ರಶೀದ್ ಖಾನ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಅತೀ ವೇಗವಾಗಿ ಟಿ20 ಕ್ರಿಕೆಟ್ನಲ್ಲಿ 600 ವಿಕೆಟ್ ಕಬಳಿಸಿದ ದಾಖಲೆ ರಶೀದ್ ಹೆಸರಿಗೆ ದಾಖಲಾಗಿದೆ. ಬ್ರಾವೊ 545 ಟಿ20 ಪಂದ್ಯಗಳ ಮೂಲಕ ಈ ಸಾಧನೆ ಮಾಡಿದ್ದರೆ, ರಶೀದ್ ಖಾನ್ ಕೇವಲ 441 ಪಂದ್ಯಗಳನ್ನಾಡಿ ಈ ಮೈಲುಗಲ್ಲು ನಿರ್ಮಿಸಿದ್ದಾರೆ.
ಬ್ರಾವೊ ದಾಖಲೆ ಮುರಿಯಲು 31 ವಿಕೆಟ್ ಅಗತ್ಯ
ಟಿ20 ವಿಕೆಟ್ ಸಾಧಕರ ಪಟ್ಟಿಯಲ್ಲಿ ಸದ್ಯ ಡ್ವೇನ್ ಬ್ರಾವೊ ಅವರೇ ಅಗ್ರಸ್ಥಾನ ಪಡೆದಿದ್ದಾರೆ. ಅವರು ಒಟ್ಟು 630 ವಿಕೆಟ್ ಕಬಳಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ರಶೀದ್ ಖಾನ್ಗೆ ಇನ್ನು 31 ವಿಕೆಟ್ಗಳ ಅಗತ್ಯವಿದೆ. 25 ವರ್ಷದ ರಶೀದ್ಗೆ ಈ ದಾಖಲೆ ಮುರಿಯುವು ಕಷ್ಟದ ಮಾತಲ್ಲ. ಬ್ರಾವೊ ಈಗಾಗಲೇ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ರಶೀದ್ ಇನ್ನೂ ಕನಿಷ್ಠ 10 ವರ್ಷಗಳ ಕಾಲ ಕ್ರಿಕೆಟ್ ಆಡುವುದರಲ್ಲಿ ಯಾವುದೇ ಅನುಮಾನ ಬೇಡ. ಉಳಿದಂತೆ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ 405 ಪಂದ್ಯಗಳಲ್ಲಿ 502 ವಿಕೆಟ್ ಪಡೆದರೆ, ಶಕೀಬ್ ಅಲ್ ಹಸನ್ 444 ಪಂದ್ಯಗಳಲ್ಲಿ 492 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ Rashid Khan: ರಶೀದ್ ಖಾನ್ಗೆ ದಂಡ ವಿಧಿಸಿದ ಐಸಿಸಿ, ಅವರು ಮಾಡಿದ ತಪ್ಪೇನು?
ರಶೀದ್ ಖಾನ್ 93 ಅಂತಾರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ 14.14 ಸರಾಸರಿ ಮತ್ತು 6.08 ಎಕಾನಮಿ ರೇಟ್ನಲ್ಲಿ 152 ವಿಕೆಟ್ಗಳನ್ನು ಪಡೆದಿದ್ದಾರೆ. ಐಪಿಎಲ್ನಲ್ಲಿ 121 ಪಂದ್ಯಗಳಲ್ಲಿ 21.82ರ ಸರಾಸರಿಯಲ್ಲಿ 149 ವಿಕೆಟ್ ಪಡೆದಿದ್ದಾರೆ. ರಶೀದ್ 2017 ರಿಂದ 2021 ರವರೆಗೆ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಪರ ಆಡಿದ್ದರು. ನಂತರ ಗುಜರಾತ್ ಟೈಟನ್ಸ್ ಸೇರಿಕೊಂಡಿದ್ದಾರೆ.