ಬ್ರಿಸ್ಬೇನ್ : ಅಫಘಾನಿಸ್ತಾನ ತಂಡದ ವಿರುದ್ಧ ಆಡದಿರುವ ಆಸ್ಟ್ರೇಲಿಯಾ ಬಳಗದ ತೀರ್ಮಾನವನ್ನು ವಿರೋಧಿಸಿ ಬಿಗ್ ಬ್ಯಾಶ್ ಲೀಗ್ನಿಂದ ಹೊರಕ್ಕೆ ಹೋಗುವುದಾಗಿ ಸ್ಟಾರ್ ಆಲ್ರೌಂಡರ್ ರಶೀದ್ ಖಾನ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಬೆದರಿಕೆ ಒಡ್ಡಿದ್ದಾರೆ. ಈ ಮೂಲಕ ಅಫಘಾನಿಸ್ತಾನ ಕ್ರಿಕೆಟ್ ಸಂಸ್ಥೆ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗಳ ನಡುವಿನ ಸಂಬಂಧ ಹಳಸಿ ಹೋಗಲು ಆರಂಭಗೊಂಡಿದೆ.
ಅಫಘಾನಿಸ್ತಾನದಲ್ಲಿ ತಾಲಿಬಾನಿಗಳು ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಯುಎಇನಲ್ಲಿ ಆಯೋಜನೆಗೊಂಡಿದ್ದ ಅಪಘಾನಿಸ್ತಾನ ವಿರುದ್ಧದ ಏಕ ದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ. ಇದಕ್ಕೆ ಅಫಘಾನಿಸ್ತಾನದ ಕ್ರಿಕೆಟರ್ ರಶೀದ್ ವಿರೋಧ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತೆಗೆದುಕೊಂಡಿರುವ ತೀರ್ಮಾನ ನನಗೆ ದಿಗ್ಬ್ರಮೆ ಉಂಟು ಮಾಡಿದೆ. ನಾವು ಜಾಗತಿಕ ಕ್ರಿಕೆಟ್ ಲೋಕದಲ್ಲಿ ಗಟ್ಟಿಯಾಗಿ ನೆಲಯೂರಲು ಬಯಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಂಡಿರುವ ನಿರ್ಧಾರದಿಂದ ನಮಗೆ ಹಿನ್ನಡೆಯಾಗಿದೆ. ಅಫಘಾನಿಸ್ತಾನ ತಂಡದ ವಿರುದ್ಧ ಆಡುವುದು ಆಸ್ಟ್ರೇಲಿಯ ತಂಡಕ್ಕೆ ಅಹಿತಕರ ಎನಿಸಿದರೆ, ನಾನು ಬಿಬಿಎಲ್ನಲ್ಲಿ ಪಾಲ್ಗೊಂಡು ಇಲ್ಲಿನವರಿಗೆ ಅಹಿತಕರ ಸನ್ನಿವೇಶ ಸೃಷ್ಟಿಸುವುದಿಲ್ಲ. ಹೀಗಾಗಿ ನನ್ನ ಪಾಲ್ಗೊಳ್ಳುವಿಕೆಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇನೆ, ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ | Mumbai Indians | ಎಮಿರೇಟ್ಸ್‌ಗೆ ಕೀರನ್ , ಕೇಪ್‌ಟೌನ್‌ಗೆ ರಶೀದ್ ಖಾನ್; ನಾಯಕರನ್ನು ಘೋಷಿಸಿದ ಮುಂಬಯಿ ಇಂಡಿಯನ್ಸ್