ಮುಂಬಯಿ: ದ್ವಿಪಕ್ಷೀಯ ಟಿ20 ಸರಣಿಗಳ ಹೆಚ್ಚಳದಿಂದಾಗಿ ಹಿರಿಯ ಕ್ರಿಕೆಟಿಗರ ಮೇಲೆ ಒತ್ತಡ ಬೀಳುತ್ತದೆ. ಅದರ ಬದಲು ಲೀಗ್ ಮಾದರಿಗೆ ಪ್ರೇರಣೆ ನೀಡುವುದೇ ಉತ್ತಮ ಎಂದು ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ (ravi shastri) ನುಡಿದಿದ್ದಾರೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ವೇಳೆ ಅವರು ಮೂರು ಮಾದರಿಯಲ್ಲಿ ಆಡುವ ಹಿರಿಯ ಆಟಗಾರರ ಮೇಲೆ ಉಂಟಾಗುವ ಒತ್ತಡವನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿದ್ದಾರೆ.
ಕಳೆದ ಸೋಮವಾರ ಇಂಗ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದ್ದರು. ಅದಕ್ಕವರು ಮೂರು ಮಾದರಿಯಲ್ಲಿ ಆಡುವ ಒತ್ತಡವೇ ಕಾರಣ ಎಂದು ಹೇಳಿದ್ದರು. ಅಲ್ಲದೆ, ಬಿಡುವಿಲ್ಲದ ಕ್ರಿಕೆಟ್ ಕ್ಯಾಲೆಂಡರ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಕ್ರಿಕೆಟ್ ಕ್ಯಾಲೆಂಡರ್ ಕುರಿತು ಚರ್ಚೆಗಳು ಹುಟ್ಟಿಕೊಂಡಿವೆ. ಅಂತೆಯೇ ಐಸಿಸಿ ಕೆಲವು ದಿನಗಳ ಹಿಂದೆ ಮುಂದಿನ ಫ್ಯೂಚರ್ ಟೂರ್ ಪ್ರೋಗ್ರಾಮ್ ಬಿಡುಗಡೆ ಮಾಡಿದೆ. ಅದರಲ್ಲಿ ಮಿತಿ ಮೀರಿದ ದ್ವಿಪಕ್ಷೀಯ ಸರಣಿಗಳನ್ನು ಸೇರಿಸಲಾಗಿದೆ.
ಇವೆಲ್ಲ ಹಿನ್ನೆಲೆಯಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ, ಹೆಚ್ಚಿನ ಸಂಖ್ಯೆಯಲ್ಲಿ ಟಿ20 ಸರಣಿಯನ್ನು ನಿಗದಿ ಮಾಡುವ ಮೊದಲು ಯೋಚನೆ ಮಾಡಬೇಕಾಗುತ್ತದೆ. ಅದಕ್ಕಿಂತ ಬದಲು ಫ್ರಾಂಚೈಸಿ ಕ್ರಿಕೆಟ್‌ಗೆ ಪ್ರೇರಣೆ ನೀಡುವುದೇ ಉತ್ತಮ. ಭಾರತವೇ ಆಗಲಿ, ವೆಸ್ಟ್ ಇಂಡೀಸ್, ಪಾಕಿಸ್ತಾನ ಯಾವುದೇ ದೇಶವಿರಲಿ. ಅಲ್ಲಿನ ಲೀಗ್ ಕ್ರಿಕೆಟ್‌ಗೆ ಉತ್ತೇಜನ ನೀಡಬೇಕು,” ಎಂದು ಶಾಸ್ತ್ರಿ ನುಡಿದಿದ್ದಾರೆ.
“ಲೀಗ್ ಪಂದ್ಯಗಳನ್ನು ಹೆಚ್ಚು ಅಯೋಜಿಸಬೇಕು. ವಿಶ್ವ ಕಪ್ ಮೂಲಕ ಎರಡು ದೇಶಗಳ ನಡುವೆ ಪಂದ್ಯಗಳನ್ನು ಆಯೋಜಿಸಬೇಕು. ಆಗ ಪಂದ್ಯಗಳಿಗೆ ಮೌಲ್ಯ ಬರುತ್ತದೆ. ಅಂತೆಯೇ ವಿಶ್ವ ಕಪ್ ಟೂರ್ನಿಗಳು ಮುಖ್ಯ ಎಂದು ಅನಿಸಿಕೊಳ್ಳುತ್ತದೆ,” ಎಂದು ಶಾಸ್ತ್ರಿ ನುಡಿದರು.
“ಹೆಚ್ಚು ದ್ವಿಪಕ್ಷೀಯ ಸರಣಿಗಳು ಕ್ರಿಕೆಟಿಗರ ಮೇಲೆ ಒತ್ತಡ ಸೃಷ್ಟಿ ಮಾಡುತ್ತದೆ. ಅಂತೆಯೇ ಮೂರು ಮಾದರಿಯ ಆಟಗಾರರು ಫಾರ್ಮ್ ಕಂಡುಕೊಳ್ಳುವುದಕ್ಕೆ ಪೇಚಾಡಬೇಕಾಗುತ್ತೆ. ಅಂಥ ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು,” ಎಂದು ಹೇಳಿದರು.
ಇದೇ ವೇಳೆ ಅವರು ಟೆಸ್ಟ್ ಕ್ರಿಕೆಟ್‌ಗೆ ಪ್ರಾಧಾನ್ಯತೆ ನೀಡುವ ಮೂಲಕ ಸಾಂಪ್ರದಾಯಿಕ ಕ್ರಿಕೆಟ್ ಉಳಿವಿಗೆ ಪ್ರಯತ್ನಿಸಬೇಕು ಎಂಬುದಾಗಿಯೂ ತಿಳಿಸಿದರು.
ಇದನ್ನೂ ಓದಿ | IND vs ENG ODI | ರಿಷಭ್ ಪಂತ್ ಮಾಜಿ ಕೋಚ್ ರವಿ ಶಾಸ್ತ್ರಿಗೆ ಕೊಟ್ಟ ಗುರುದಕ್ಷಿಣೆ ಸೂಪರ್