ಮುಂಬಯಿ: ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಎರಡನೇ ಬಾರಿ ತೇರ್ಗಡೆ ಹೊಂದಿದೆ. ಮೊದಲ ಆವೃತ್ತಿಯಲ್ಲಿ ಫೈನಲ್ಗೆ ಪ್ರವೇಶ ಪಡೆದ ಹೊರತಾಗಿಯೂ ನ್ಯೂಜಿಲ್ಯಾಂಡ್ ವಿರುದ್ಧ ಸೋತ ಕಾರಣ ಚಾಂಪಿಯನ್ಪಟ್ಟ ಅಲಂಕರಿಸಲು ವಿಫಲಗೊಂಡಿತ್ತು. ಎರಡನೇ ಆವೃತ್ತಿಯಲ್ಲಿ ಮತ್ತೆ ಪ್ರಶಸ್ತಿ ಸುತ್ತಿಗೇರಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡ ಫೈನಲ್ನಲ್ಲಿ ಎದುರಾಳಿ. ಹೀಗಾಗಿ ತಂಡ ರಚನೆಯ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿವೆ. ಇಂಗ್ಲೆಂಡ್ನ ಕೆನಿಂಗ್ಟನ್ ಓವಲ್ನಲ್ಲಿ ನಡೆಯಬೇಕಾಗಿರುವ ಈ ಹಣಾಹಣಿಯಲ್ಲಿ ಯಾರೆಲ್ಲ ಇರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಬಗ್ಗೆಯೂ ಚರ್ಚೆಗಳು ಶುರುವಾಗಿದೆ. ಯಾಕೆಂದರೆ ಟೂರ್ನಿಗಿಂತ ಮೊದಲು ಐಪಿಎಲ್ 16ನೇ ಆವೃತ್ತಿ ನಡೆಯಲಿದೆ. ಹೀಗಾಗಿ ಐಪಿಎಲ್ ಆಡಿ ಮುಗಿಸಿ ನೇರವಾಗಿ ಇಂಗ್ಲೆಂಡ್ಗೆ ಹೋದರೆ ಒತ್ತಡ ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಅದಕ್ಕೆ ಪರಿಹಾರ ಎಂಬಂತೆ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಆಡುವ ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು ಈ ವರ್ಷಾರಂಭದಲ್ಲಿ ಐಪಿಎಲ್ ಫ್ರಾಂಚೈಸಿಗಳ ಜತೆ ಮಾತನಾಡಿ ಮುಂಬರುವ ಏಕ ದಿನ ವಿಶ್ವ ಕಪ್ಗೆ ಪೂರಕವಾಗಿ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂದು ಹೇಳಿತ್ತು. ಅದೇ ರೀತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಆಡಲಿರುವ ಆಟಗಾರರಿಗೂ ಐಪಿಎಲ್ನಲ್ಲಿ ವಿಶ್ರಾಂತಿ ನೀಡಬೇಕು ಎಂದು ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಟೂರ್ನಿ ಮೇ 28ಕ್ಕೆ ಮುಕ್ತಾಯವಾಗುತ್ತದೆ. ಜೂನ್ 7ರಿಂದ 11ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನಡೆಯಲಿದೆ. ಹತ್ತು ದಿನಗಳ ಒಳಗೆ ಟಿ20 ಮಾದರಿಯಿಂದ ಟೆಸ್ಟ್ ಮಾದರಿಗೆ ಪರಿವರ್ತನೆಗೊಂಡು ಇಂಗ್ಲೆಂಡ್ಗೆ ಪ್ರವಾಸ ಮಾಡಿ ಸಜ್ಜುಗೊಳ್ಳುವುದು ಸುಲಭದ ಕೆಲಸವಲ್ಲ. ಹೀಗಾಗಿ ಫ್ರಾಂಚೈಸಿಗಳ ಜತೆ ಬಿಸಿಸಿಐ ಮಾತುಕತೆ ನಡೆಸಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವಂತೆ ಸೂಚನೆ ನೀಡಬೇಕು ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ ಅವರು, ಐಪಿಎಲ್ ಅವಧಿಯಲ್ಲಿ ಫ್ರಾಂಚೈಸಿಗಳು ಹಿರಿಯ ಆಟಗಾರರಿಗೆ ಹೆಚ್ಚು ವಿಶ್ರಾಂತಿ ಕಲ್ಪಿಸುವಂತೆ ಬಿಸಿಸಿಐ ಮನವರಿಕೆ ಮಾಡಬೇಕು. ಭಾರತ ತಂಡಕ್ಕೆ ಅವರ ನೆರವು ಬೇಕಾಗಿದೆ. ಹೀಗಾಗಿ ಹೆಚ್ಚು ಪಂದ್ಯಗಳಲ್ಲಿ ಆಡದಂತೆ ನೋಡಿಕೊಳ್ಳಬೇಕು ಎಂದು ರವಿ ಸಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : IND VS AUS: ಸಿಕ್ಸರ್ ಬಾರಿಸಿ ರವಿ ಶಾಸ್ತ್ರಿ ದಾಖಲೆ ಮುರಿದ ವೇಗಿ ಉಮೇಶ್ ಯಾದವ್
ಕ್ರಿಕೆಟ್ ಪಂದ್ಯಗಳ ಸಂಖ್ಯೆ ಏರಿಕೆಯಾಗುತ್ತಿವೆ. ಆಟಗಾರರಿಗೆ ಕಡಿಮೆ ಪ್ರಮಾಣದಲ್ಲಿ ವಿಶ್ರಾಂತಿ ಲಭಿಸುತ್ತಿದೆ. ಇದರಿಂದಾಗಿ ಆಟಗಾರರ ಸೇವೆ ಅಗತ್ಯ ಸಂದರ್ಭದಲ್ಲಿ ರಾಷ್ಟ್ರೀಯ ತಂಡಕ್ಕೆ ದೊರೆಯುತ್ತಿಲ್ಲ. ಗಾಯದ ಸಮಸ್ಯೆಯಿಂದಾಗಿ ಹೊರಕ್ಕೆ ಕುಳಿತುಕೊಳ್ಳಬೇಕಾಗಿದೆ. ಹೀಗಾಘಿ ಹೆಚ್ಚು ಪಂದ್ಯಗಳಲ್ಲಿ ಆಡಿದಷ್ಟು ಹೆಚ್ಚು ಬ್ರೇಕ್ ಕೂಡ ನೀಡಬೇಕಾಗುತ್ತದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ರಿಷಬ್ ಪಂತ್ ಇಲ್ಲದ ಕಾರಣ ಕೆಎಲ್ ರಾಹುಲ್ ಡಬ್ಲ್ಯುಟಿಸಿಯಲ್ಲಿ ವಿಕೆಟ್ ಹಿಂದೆ ಕೀಪಿಂಗ್ ಮಾಡಬೇಕು. ಇಂಗ್ಲೆಂಡ್‌ನಲ್ಲಿ ವೇಗದ ಬೌಲಿಂಗ್ಗೆ ಹೆಚ್ಚು ಅವಕಾಶ ಇರುತ್ತದೆ. ಆದ್ದರಿಂದ ಕೀಪರ್ ಹೆಚ್ಚಿನ ಸಮಯ ದೂರ ನಿಲ್ಲಬೇಕಾಗುತ್ತದೆ. ಅದರಿಂದಾಗಿ ರಾಹುಲ್ಗೆ ಅವಕಾಶ ನೀಡಿದರೆ ಅವರು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ಹೆಚ್ಚಲಿದೆ. ಕೆ. ಎಸ್ ಭರತ್ ಹೊಸ ಆಟಗಾರ. ಅವರನ್ನು ಆಡಿಸಬೇಕು ಎಂದೇನೂ ಇಲ್ಲ. ಅವರಿಗೆ ಮುಂದೆ ಅವಕಾಶಗಳು ಸಿಗಬಹುದು. ದೊಡ್ಡ ದೊಡ್ಡ ಪಂದ್ಯಗಳಲ್ಲಿ ಹಿರಿಯ ಆಟಗಾರರಿಗೆ ಆಯ್ಕೆ ವಿಚಾರದಲ್ಲಿ ಹೆಚ್ಚು ಜಾಣತನ ತೋರಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.