Site icon Vistara News

ಜಡೇಜಾಗೂ ನಮಗೂ ಯಾವುದೇ ಸಂಬಂಧವಿಲ್ಲ; ತಂದೆಯಿಂದ ಶಾಕಿಂಗ್ ಹೇಳಿಕೆ

ravindra jadeja father

ಅಹಮದಾಬಾದ್​: ಭಾರತ ಕ್ರಿಕೆಟ್​ ತಂಡದ ಆಲ್‌ ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರ ತಂದೆ ಅನಿರುದ್ಧ್ ಸಿಂಗ್(Anirudhsinh Jadeja) ಮಗ ಮತ್ತು ಸೊಸೆಯ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಮಗ ರವೀಂದ್ರ ಜಡೇಜಾ ಮತ್ತು ಸೊಸೆ ರಿವಾಬಾ(Rivaba Jadeja) ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಾಧ್ಯಮವೊಂದರ ಜತೆ ಮಾತನಾಡಿದ ಅನಿರುದ್ಧ್ ಸಿಂಗ್, “ನನ್ನ ಮಗ ಜಡೇಜಾ ಮದುವೆಯಾದ ಕೆಲವು ತಿಂಗಳಲ್ಲೇ ನಮ್ಮಿಂದ ದೂರವಾಗಿದ್ದಾನೆ. ಇದಕ್ಕೆ ಕಾರಣ ಅವನ ಪತ್ನಿ ರಿವಾಬಾ. ಆಕೆ ಎಲ್ಲವೂ ತನ್ನದಾಗಬೇಕು ಎಂಬ ಹಠಕ್ಕೆ ಬಿದ್ದು ಆತನನ್ನು ನಮ್ಮಿಂದ ದೂರ ಆಗುವಂತೆ ಮಾಡಿದಳು” ಎಂದು ಹೇಳಿದ್ದಾರೆ. ರವೀಂದ್ರ ಜಡೇಜಾ ಅವರ ತಂದೆ ಕಳೆದ 10 ವರ್ಷಗಳಿಂದ ಜಾಮ್‌ನಗರದಲ್ಲಿ ವಾಸಿಸುತ್ತಿದ್ದಾರೆ.

ಆತ ಮದುವೆಯಾಗದಿದ್ದರೇ ಚೆನ್ನಾಗಿರುತ್ತಿತ್ತು


“ನಾನು ಈ ವಿಚಾರವನ್ನು ಹೇಳುವಾಗ ಕೆಲವರು ನನಗೆ ಹಣದ ಅಗತ್ಯವಿದೆ ಎಂದು ಭಾವಿಸಬಹುದು. ಆದರೆ ನನಗೆ ಯಾವುದೇ ಹಣದ ಅಗತ್ಯವಿಲ್ಲ. ನನ್ನ ಬಳಿ ಎಲ್ಲವೂ ಇದೆ. ಜಡೇಜಾ ಆಕೆಯನ್ನು ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿತ್ತು. ನಾನು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ರವೀಂದ್ರ ಜಡೇಜಾ ಅವರು ತಂದೆ ಮತ್ತು ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

‘ಸೊಸೆ ರಿವಾಬಾ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವರು ನಮ್ಮನ್ನು ಕರೆಯುವುದಿಲ್ಲ, ನಾವು ಸಹ ಅವರನ್ನು ಕರೆಯುವುದಿಲ್ಲ. ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ. 5 ವರ್ಷಗಳಿಂದ ಮೊಮ್ಮಗಳ ಮುಖವನ್ನೇ ನೋಡಿಲ್ಲ” ಎಂದು ಅನಿರುದ್ಧ್ ಸಿಂಗ್ ಅಳಲು ತೋಡಿಕೊಂಡರು.

“ಸಹೋದರಿ ರವೀಂದ್ರ ಜಡೇಜಾ ಅವರನ್ನು ತಾಯಿಯಂತೆ ನೋಡಿಕೊಂಡಳು. ಆದರೆ ಇದೀಗ ಅವನಿಗೂ ಸಹೋದರಿಗೂ ಸಂಬಂಧವೇ ಇಲ್ಲದಂತಾಗಿದೆ” ಎಂದು ಅನಿರುದ್ಧ್ ಸಿಂಗ್ ಬೇಸರ ಹೊರಹಾಕಿದರು. ಜಡೇಜಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನಕ್ಕೆ ಇಂದಿಗೆ 15 ವರ್ಷಗಳು ತುಂಬಿದೆ. ಇದೇ ದಿನದಂದು ಜಡೇಜಾ ತಂದೆ ಮಗನ ಮತ್ತು ಸೊಸೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Exit mobile version