ನವದೆಹಲಿ: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ(Ravindra Jadeja) ಪತ್ನಿ ಪರ ಪ್ರಚಾರಕ್ಕಿಳಿದಿರುವ ಬಗ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಆಟಗಾರ ರಾಜಕೀಯ ಪಕ್ಷಗಳ ಪರ ಪ್ರಚಾರ ಮಾಡುವುದು ಒಪ್ಪಂದದ ಉಲ್ಲಂಘನೆಯಲ್ಲವೇ? ಹಿತಾಸಕ್ತಿಯ ಸಂರ್ಘರ್ಷವಲ್ಲವೇ ಎಂದು ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಟ್ವೀಟ್ ಮೂಲಕ ಬಿಸಿಸಿಐಗೆ ಪ್ರಶ್ನಿಸಿದ್ದಾರೆ.
ಕ್ರಿಕೆಟಿಗ ಜಡೇಜಾ ಅವರ ಪತ್ನಿ ರಿವಾಬಾ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಾಮ್‌ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಜಡೇಜ ಅವರ ಪತ್ನಿ ಪ್ರಚಾರಕ್ಕೆ ಮಾಡಿರುವ ಪೋಸ್ಟರ್‌ನಲ್ಲಿ ಟೀಮ್ ಇಂಡಿಯಾ ಜೆರ್ಸಿ ಧರಿಸಿರುವ ಜಡೇಜ ಚಿತ್ರವನ್ನು ಲಗತ್ತಿಸಲಾಗಿದೆ. ಬಳಿಕ ಟ್ವೀಟ್ ಅಳಿಸಿ ಹಾಕಲಾಗಿದೆ. ಇದನ್ನು ಪ್ರಶ್ನಿಸಿ ವಾರಿಸ್ ಪಠಾಣ್ ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ.
ಬಿಸಿಸಿಐ ಗುತ್ತಿಗೆ ವ್ಯಾಪ್ತಿಗೆ ಬರುವ ಕ್ರಿಕೆಟಿಗರು ಬಿಸಿಸಿಐ ಅನುಮತಿ ಇಲ್ಲದೆ ಯಾವುದೇ ರಾಜಕೀಯ ಪಕ್ಷದ ಕುರಿತು ಪ್ರಚಾರ ಮಾಡಿದರೆ ಮತ್ತು ವಿದೇಶಿ ಲೀಗ್ಗಳಲ್ಲಿ ಕ್ರಿಕೆಟ್ ಆಡಿದರೆ ಅದು ಹಿತಾಸಕ್ತಿಯ ಸಂರ್ಘರ್ಷ ಎಂದು ಆಟಗಾರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಜಡೇಜಾ ತಮ್ಮ ಪತ್ನಿಯ ಪರ ರೋಡ್ ಶೋ ನಡೆಸಿ ಮತ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಇವರಿಗೆ ನಿಯಮ ಅನ್ವಯಿಸುವುದಿಲ್ಲವೇ ಎಂದು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
ಗಾಯದಿಂದಾಗಿ ಜಡೇಜಾ ಟೀಮ್ ಇಂಡಿಯಾದಿಂದ ದೂರವುಳಿದಿರುವ ಕುರಿತು ಆಕ್ರೋಶ ಕೇಳಿ ಬಂದಿದೆ. ಚುನಾವಣಾ ಪ್ರಚಾರ ನಡೆಸಲು ಜಡೇಜ ಫಿಟ್ ಆಗಿದ್ದು, ಟೀಮ್ ಇಂಡಿಯಾ ಪರ ಆಡಲು ಅನ್‌ಫಿಟ್ ಎಂದು ಆರೋಪಿಸಿದ್ದಾರೆ. ಇನ್ನು ಕೆಲವರು ಜಡೇಜಾ ಅವರು ಪತ್ನಿಯ ಪ್ರಚಾರಕ್ಕೋಸ್ಕರವೇ ಉದ್ದೇಶಪೂರ್ವಕವಾಗಿ ಗಾಯದ ನೆಪವೊಡ್ಡಿ ಬಾಂಗ್ಲಾ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | ENG VS PAK | ಬರೋಬ್ಬರಿ 17 ವರ್ಷಗಳ ಬಳಿಕ ಟೆಸ್ಟ್ ಆಡಲು ಪಾಕಿಸ್ತಾನ ತಲುಪಿದ ಇಂಗ್ಲೆಂಡ್ ತಂಡ