Site icon Vistara News

IND vs WI: ಕಪಿಲ್ ದೇವ್​​ ಹೆಸರಲ್ಲಿದ್ದ 30 ವರ್ಷದ ದಾಖಲೆ ಮುರಿದ ರವೀಂದ್ರ ಜಡೇಜಾ

Ravindra Jadeja puzzled the batters

ಬಾರ್ಬಡಾಸ್​: ವೆಸ್ಟ್​ ಇಂಡೀಸ್(IND vs WI)​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ ಆಲ್​ರೌಂಡರ್​ ರವೀಂದ್ರ ಜಡೇಜಾ(Ravindra Jadeja) ಅವರು ನೂತನ ದಾಖಲೆಯೊಂದನ್ನು ಬರೆದಿದ್ದಾರೆ. 3 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಮೊದಲ ವಿಶ್ವಕಪ್​ ತಂದುಕೊಟ್ಟ ನಾಯಕ ಕಪಿಲ್ ದೇವ್(Kapil Dev) ಹೆಸರಿನಲ್ಲಿದ್ದ 30 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.

ಈ ಸರಣಿ ಆರಂಭಕ್ಕೂ ಮುನ್ನ ಜಡೇಜಾ ಅವರು ವೆಸ್ಟ್ ಇಂಡೀಸ್ ನೆಲದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಸಾಧಕರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರು. 29 ಏಕದಿನ ಪಂದ್ಯಗಳಿಂದ 41 ವಿಕೆಟ್ ಪಡೆದಿದ್ದ ಅನಿಲ್ ಕುಂಬ್ಳೆ 2ನೇ ಸ್ಥಾನದಲ್ಲಿದ್ದರೆ, 38 ಪಂದ್ಯಗಳಿಂದ 43 ವಿಕೆಟ್ ಗಳಿಸಿದ್ದ ಕಪಿಲ್ ದೇವ್ ಮೊದಲ ಸ್ಥಾನದಲ್ಲಿದ್ದರು. ಆದರೆ ಗುರುವಾರ ಪಂದ್ಯದಲ್ಲಿ ಮೂರು ವಿಕೆಟ್​ ಕಬಳಿಸಿದ ಜಡೇಜಾ ಕುಂಬ್ಳೆ ಮತ್ತು ಕಪಿಲ್​ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

ಈ ಸಾಧನೆ ಮಾತ್ರವಲ್ಲದೆ ವೆಸ್ಟ್ ಇಂಡೀಸ್ ತಂಡದ ಕೋರ್ಟ್ನಿ ವಾಲ್ಶ್(Courtney Walsh) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವಾಲ್ಶ್ 38 ಪಂದ್ಯಗಳಿಂದ 44 ವಿಕೆಟ್ ಪಡೆದು ಉಭಯ ದೇಶಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದರು. ಇದೀಗ ಜಡೇಜಾ ಕೂಡ ಜಂಟಿಯಾಗಿ ಈ ಸ್ಥಾನದಲ್ಲಿದ್ದಾರೆ. ದ್ವಿತೀಯ ಪಂದ್ಯದಲ್ಲಿ ಜಡೇಜಾ ಒಂದು ವಿಕೆಟ್​ ಪಡೆದರು ವಾಲ್ಶ್ ದಾಖಲೆ ಪತನಗೊಳ್ಳಲಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಜಡೇಜಾ ಅಜೇಯ 16 ರನ್​ ಮತ್ತು 3 ವಿಕೆಟ್​ ಕಿತ್ತು ಆಲ್​ರೌಂಡರ್​ ಪ್ರದರ್ಶನ ತೋರಿದರು.

ಇದನ್ನೂ ಓದಿ ind vs wi : ವಿಂಡೀಸ್ ವಿರುದ್ಧದ ಮೊದಲ ಒಡಿಐ ಪಂದ್ಯದಲ್ಲಿ ಭಾರತಕ್ಕೆ 5 ವಿಕೆಟ್​​ ಸುಲಭ ಜಯ

ಭಾರತಕ್ಕೆ 5 ವಿಕೆಟ್​ ಗೆಲುವು

ಗುರುವಾರ ನಡೆದ ಸಣ್ಣ ಮೊತ್ತದ ಮೇಲಾಟದಲ್ಲಿ ಭಾರತ ತಂಡ 5 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್​ ಸ್ಟೇಡಿಯಂನಲ್ಲಿ(Kensington Oval, Bridgetown, Barbados) ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ವಿಂಡೀಸ್​ ಕುಲ್​ದೀಪ್​ ಯಾದವ್​ ಮತ್ತು ಜಡೇಜಾ ಸ್ಪಿನ್​ ಮೋಡಿಗೆ ಸಿಲುಕಿ 23 ಓವರ್‌ಗಳಲ್ಲಿ 114 ರನ್ನಿಗೆ ಆಲೌಟಾಯಿತು. ಗುರಿ ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಜಯ ಸಾಧಿಸಿತು. ಇಶಾನ್ ಕಿಶನ್ 52, ಗಿಲ್ 7, ಸೂರ್ಯಕುಮಾರ್ 19, ಶಾರ್ದೂಲ್ ಠಾಕೂರ್ 1 ರನ್ ಗಳಿಸಿ ಔಟಾದರು. ಜಡೇಜಾ ಔಟಾಗದೆ 16 ಮತ್ತು ಕೆಳ ಕ್ರಮಾಂದಲ್ಲಿ ಆಡಲಿಳಿದ ರೋಹಿತ್ ಶರ್ಮಾ ಔಟಾಗದೆ 12 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Exit mobile version