Site icon Vistara News

ಮೂರನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ರಾಜ್​ಕೋಟ್​ನಲ್ಲಿ ಪೂಜಾರ, ಜಡೇಜಾಗೆ ಸನ್ಮಾನ

Ravindra Jadeja, Cheteshwar Pujara

ರಾಜ್​ಕೋಟ್​: ಇಂಗ್ಲೆಂಡ್​ ವಿರುದ್ಧದ ಮೂರನೇ(India-England Third Test) ಟೆಸ್ಟ್ ಪಂದ್ಯಕ್ಕೂ ಮುನ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(SCA) ರವೀಂದ್ರ ಜಡೇಜಾ(Ravindra Jadeja) ಮತ್ತು ಚೇತೇಶ್ವರ ಪೂಜಾರ(Cheteshwar Pujara) ಅವರಿಗೆ ಗೌರವ ಸನ್ಮಾನ ಮಾಡಲಿದೆ. ಉಭಯ ಆಟಗಾರರು ಭಾರತ ಕ್ರಿಕೆಟ್​ಗೆ ನೀಡಿದ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಎಸ್​ಸಿಎ ಅಧ್ಯಕ್ಷ ಜಯದೇವ್ ಶಾ(SCA President Jaydev Shah) ಹೇಳಿದ್ದಾರೆ.

ಫೆಬ್ರವರಿ 14 ರಂದು ಸೌರಾಷ್ಟ್ರ ಕ್ರಿಕೆಟ್​ ಸ್ಟೇಡಿಯಂನ(SCA Stadium) ಹೊಸ ಹೆಸರನ್ನು ಅನಾವರಣಗೊಳಿಸುವ ಸಮಾರಂಭದಲ್ಲಿ ಜಡೇಜಾ ಮತ್ತು ಪೂಜಾರ ಅವರನ್ನು ಗೌರವಿಸಲಾಗುದು ಎಂದು ಜಯದೇವ್ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೂಜಾರ ಅವರು ಎಲೈಟ್ 100-ಟೆಸ್ಟ್ ಕ್ಲಬ್‌ಗೆ ಪ್ರವೇಶಿಸಿದ ಕೇವಲ ಹದಿಮೂರನೇ ಭಾರತೀಯ ಆಟಗಾರರಾಗಿದ್ದಾರೆ. ಜಡೇಜಾ ಅವರು ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಭಾರತದ ಮ್ಯಾಚ್ ವಿನ್ನರ್ ಆಗಿದ್ದಾರೆ. ಮತ್ತು ಪ್ರಸ್ತುತ ಐಸಿಸಿ ಟೆಸ್ಟ್ ಆಲ್-ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

“ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು ಉಳಿದ ಮೂರು ಇಂಗ್ಲೆಂಡ್ ಟೆಸ್ಟ್‌ಗಳಿಗೆ ತಂಡವನ್ನು ಪ್ರಕಟಿಸಿದೆ. ಆದರೆ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಸತತವಾಗಿ ರನ್ ಗಳಿಸುತ್ತಿರುವ ಪೂಜಾರಗೆ ಅವಕಾಶ ಸಿಕ್ಕಿಲ್ಲ. ಸ್ಥಳೀಯ ಆಟಗಾರ ಪೂಜಾರ ಮತ್ತು ಜಡೇಜಾ ಇಬ್ಬರೂ ಇಂಗ್ಲೆಂಡ್ ವಿರುದ್ಧ ಮೈದಾನಕ್ಕಿಳಿಯುವುದನ್ನು ನೋಡಲು ವಿಶೇಷವಾಗಿತ್ತು ಆದರೆ ಇದು ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಸರವಿಲ್ಲ ಇದು ಆಟದ ಭಾಗ” ಎಂದು ಜಯದೇವ್ ಹೇಳಿದರು.

ಇದನ್ನೂ ಓದಿ IND vs ENG: ಕೊನೆಗೂ ಭಾರತ ತಂಡ ಪ್ರಕಟ; ವಿರಾಟ್​ ಕೊಹ್ಲಿ ಸರಣಿಯಿಂದಲೇ ಔಟ್​

“ರವೀಂದ್ರ ಜಡೇಜಾ ಅವರು ಗಾಯದಿಂದ ಚೇತರಿಕೆ ಕಂಡಿದ್ದಾರೆ. ಆದರೆ ಮೂರನೇ ಪಂದ್ಯ ಆಡಲಿದ್ದಾರಾ ಎನ್ನುವುದು ನನಗೆ ತಿಳಿದಿಲ್ಲ. ಅವರು ಕಾರ್ಯಕ್ರಮಕ್ಕೆ ಬರುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ. ವಿಶ್ವದ ಅತ್ಯುತ್ತಮ ಟೆಸ್ಟ್ ಆಲ್‌ರೌಂಡರ್​ಗಳಲ್ಲಿ ಜಡೇಜಾ ಕೂಡ ಒಬ್ಬರು. ಇದಕ್ಕಾಗಿಯೇ ನಾವು ಅವರನ್ನು ಅಭಿನಂದಿಸುತ್ತೇವೆ’ ಎಂದು ಜಯದೇವ್ ಮಾಹಿತಿ ನೀಡಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ(ಎಸ್‌ಸಿಎ)ಯ ಕ್ರೀಡಾಂಗಣದ ಹೆಸರು ನಾಮಕರಣವಾಗಲಿದೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್(IND vs ENG) ಪಂದ್ಯಕ್ಕೂ ಮುನ್ನ ಅಂದರೆ, ಫೆಬ್ರವರಿ 14ರಂದು ಈ ಕ್ರೀಡಾಂಗಣಕ್ಕೆ ಬಿಸಿಸಿಐನ ಮಾಜಿ ಕಾರ್ಯದರ್ಶಿ, ಹಿರಿಯ ಕ್ರಿಕೆಟ್‌ ಆಡಳಿತಗಾರ ನಿರಂಜನ್‌ ಶಾ ಹೆಸರನ್ನು ಇಡಲಾಗುದು. 2013ರಲ್ಲಿ ಉದ್ಘಾಟನೆಗೊಂಡಿರುವ ಕ್ರೀಡಾಂಗಣದಲ್ಲಿ ಈ ವರೆಗೂ 2 ಟೆಸ್ಟ್‌, 4 ಏಕದಿನ, 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ.

ನಿರಂಜನ್‌ ಶಾ ಕೊಡುಗೆ ಏನು?


ನಿರಂಜನ್‌ ಶಾ ಅವರು ಭಾರತ ತಂಡವನ್ನು ಪ್ರತಿನಿಧಿಸದಿದ್ದರೂ ದೇಶಿಯ ಕ್ರಿಕೆಟ್​ನಲ್ಲಿ ಮತ್ತು ಬಿಸಿಸಿಐನಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. 1965-66 ಮತ್ತು 1975-76ರ ನಡುವೆ ಅವರು ಸೌರಾಷ್ಟ್ರ ತಂಡಕ್ಕಾಗಿ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ಸುಮಾರು ನಾಲ್ಕು ದಶಕಗಳ ಕಾಲ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಬಿಸಿಸಿಐ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಸೌರಾಷ್ಟ್ರ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರನ್ನು ಸ್ಟೇಡಿಯಂಗೆ ಇಡಲು ನಿರ್ಧರಿಸಲಾಗಿದೆ. ನಿರಂಜನ್‌ ಶಾ ಅವರಿಗೆ ಈಗ 79 ವರ್ಷ ವಯಸ್ಸು.

Exit mobile version