Site icon Vistara News

Ravindra Jadeja: ನೂತನ ದಾಖಲೆಯ ಸನಿಹ ರವೀಂದ್ರ ಜಡೇಜಾ; ಮೂರು ವಿಕೆಟ್​ ಅಗತ್ಯ

Ravindra Jadeja

ಬೆಂಗಳೂರು: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ತಮ್ಮ ಏಕದಿನ ಕ್ರಿಕೆಟ್​ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ತಲುಪುವ ಸನಿಹದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ಭಾನುವಾರ ನಡೆಯುವ ಏಷ್ಯಾಕಪ್​ನ ಸೂಪರ್​-4(Asia Cup Super 4) ಪಂದ್ಯದಲ್ಲಿ ಮೂರು ವಿಕೆಟ್​ ಕಡೆವಿದರೆ ಭಾರತ ತಂಡದ ಪರ ದಾಖಲೆಯೊಂದನ್ನು ಬರೆಯಲಿದ್ದಾರೆ.

200 ವಿಕೆಟ್​ ಮೇಲೆ ಕಣ್ಣು

ಪಾಕಿಸ್ತಾನ ವಿರುದ್ಧ ನಡೆಯುವ ಪಂದ್ಯದಲ್ಲಿ ಜಡೇಜಾ ಮೂರು ವಿಕೆಟ್​ ಪಡೆದರೆ 200 ವಿಕೆಟ್​ ಪಡೆದ ಆಟಗಾರರ ಎಲೈಟ್​ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 7ನೇ ಭಾರತೀಯ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳಲಿದ್ದಾರೆ. ಭಾರತ ಪರ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ದಾಖಲೆ ಅನಿಲ್​ ಕುಂಬ್ಳೆ ಹೆಸರಿನಲ್ಲಿದೆ. ಕುಂಬ್ಳೆ 337 ವಿಕೆಟ್​ ಕೆಡವಿದ್ದಾರೆ. 315 ವಿಕೆಟ್​ ಕಿತ್ತ ಜಾವಗಲ್​ ಶ್ರೀನಾಥ್​ ದ್ವಿತೀಯ ಸ್ಥಾನ, ಪ್ರಸ್ತುತ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಅಜಿತ್​ ಅಗರ್ಕರ್​ 288 ವಿಕೆಟ್​ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಪಠಾಣ್​ ದಾಖಲೆ ಮೇಲೆ ಕಣ್ಣು

ಒಂದು ವಿಕೆಟ್ ಪಡೆದರೆ ರವೀಂದ್ರ ಜಡೇಜಾ ಅವರು ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಜಡೇಜಾ 22 ವಿಕೆಟ್‌ಗಳನ್ನು ಪಡೆದುಕೊಂಡು ಮಾಜಿ ಆಟಗಾರ ಇಫಾನ್​ ಪಠಾಣ್​ ಅವರೊಂದಿಗೆ ಜಂಟಿಯಾಗಿ ಸ್ಥಾನ ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 17 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸಕ್ರೀಯವಾಗಿ ಏಷ್ಯಾಕಪ್​ ಆಡುತ್ತಿರುವ ಬೌಲರ್​ಗಳ ಪಟ್ಟಿಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆ ರವೀಂದ್ರ ಜಡೇಜಾ ಹೆಸರಿನಲ್ಲಿದೆ. ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಜಡೇಜಾ ಬಳಿಕ 21 ವಿಕೆಟ್​ ಪಡೆದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್​ ಅಲ್​ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ ಘಾತಕ ವೇಗಿ ಶಾಹೀನ್​ ಅಫ್ರಿದಿ 10 ವಿಕೆಟ್​ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ Ravindra Jadeja: ಏಷ್ಯಾಕಪ್​ನಲ್ಲಿ ನೂತನ ದಾಖಲೆ ಬರೆದ ರವೀಂದ್ರ ಜಡೇಜಾ

ಮುರಳೀಧರನ್‌ ನಂ.1

ಏಷ್ಯಾಕಪ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹೆಸರಿನಲ್ಲಿದೆ. ಅವರು 24 ಪಂದ್ಯ ಆಡಿ 30 ವಿಕೆಟ್​ ಕೆಡವಿದ್ದಾರೆ. ದ್ವಿತೀಯ ಸ್ಥಾನ ಯಾರ್ಕರ್​ ಕಿಂಗ್​ ಲಸೀತ್​ ಮಾಲಿಂಗ ಕಾಣಿಸಿಕೊಂಡಿದ್ದಾರೆ. ಮಾಲಿಂಗ 29 ವಿಕೆಟ್​ ಪಡೆದಿದ್ದಾರೆ. ಲಂಕಾದ ಮತ್ತೊಬ್ಬ ಆಟಗಾರ ಅಜಂತಾ ಮೆಂಡಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 26 ವಿಕೆಟ್​ ಪಡೆದಿದ್ದಾರೆ.

ಸೆಪ್ಟೆಂಬರ್​ 10ರಂದು ನಡೆಯುವ ಸೂಪರ್​-4 ಸುತ್ತಿನ (Pakistan vs India Super Fours Match)ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲು ಭಾರತ ತಂಡದ ಆಟಗಾರರು ಕೊಲಂಬೋದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಗಾಯದಿಂದ ಚೇತರಿಸಿ ಸಂಪೂರ್ಣ ಫಿಟ್​ ಆಗಿರುವ ಕನ್ನಡಿಗ ಕೆ.ಎಲ್​ ರಾಹುಲ್​ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ. ಈ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಇರುವ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯಲಿದೆ ಎಂದು ತಿಳಿದುಬಂದಿದೆ. ಉಭಯ ತಂಡಗಳ ಮೊದಲ ಮುಖಾಮುಖಿ ಮಳೆಯಿಂದ ರದ್ದುಗೊಂಡಿತ್ತು.

Exit mobile version