Site icon Vistara News

ಸೋಲಿನ ಬೆನ್ನಲ್ಲೇ ಭಾರತ ತಂಡಕ್ಕೆ ಆಘಾತ; ಸ್ಟಾರ್​ ಆಟಗಾರನಿಗೆ ಗಾಯ

ravindra jadeja

ಹೈದರಾಬಾದ್​: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯವನ್ನು ಕಳೆದುಕೊಂಡಿರಿವ ಭಾರತ ತಂಡಕ್ಕೆ ದ್ವಿತೀಯ ಪಂದ್ಯಕ್ಕೂ ಮುನ್ನ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ(Ravindra Jadeja Injury) ಸ್ನಾಯು ಸೆಳೆತದಿಂದ ಬಳಲುತ್ತಿದ್ದು ಮುಂದಿನ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಜಡೇಜಾ ಈ ಇನಿಂಗ್ಸ್​​ನಲ್ಲಿ 87 ರನ್​ ಬಾರಿಸಿದ್ದರು. ಆದರೆ, ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ರನ್​ ಓಡಲು ಕಷ್ಟಪಟ್ಟರು. ಇದೇ ಕಾರಣದಿಂದ ಅವರು ರನೌಟ್​ ಕೂಡ ಆದರು.

ರನ್​ ಓಡುವುದರಲ್ಲಿ ಪಂಟರ್​ ಆಗಿರುವ ಜಡೇಜಾ ಅವರು ದ್ವಿತೀಯ ಇನಿಂಗ್ಸ್​ನಲ್ಲಿ ಬೆನ್​ ಸ್ಟೋಕ್ಸ್​ ಅವರಿಂದ ರನೌಟ್​ ಆದರು. ಇದಕ್ಕೆ ಕಾರಣ ಅವರು ಸ್ನಾಯು ಸೆಳೆತದ ಗಾಯಕ್ಕೆ ಸಿಲುಕಿದ್ದು. ಜಡೇಜಾ ಔಟಾಗಿ ಪೆವಿಲಿಯನ್​ನತ್ತ ಸಾಗುವಾಗ ಕುಂಟುತಲೇ ಸಾಗಿದರು. ಮೂಲಗಳ ಪ್ರಕಾರ ಜಡೇಜಾ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜಡೇಜಾ ಅವರ ಗಾಯದ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನಷ್ಟೇ ಈ ಬಗ್ಗೆ ಬಿಸಿಸಿಐ ಮಾಹಿತಿ ನೀಡಬೇಕಿದೆ. ಒಂದೊಮ್ಮೆ ಅವರ ಸೇವೆ ಕಳೆದುಕೊಂಡರೆ ಈಗಾಗಲೇ ಮೊದಲ ಪಂದ್ಯ ಸೋತಿರುವ ಭಾರತಕ್ಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಅನುಭವಿ ಆಟಗಾರನ ಸೇವೆ ಕಳೆದುಕೊಳ್ಳಲಿದೆ.

ಪಂದ್ಯ ಸೋತ ಭಾರತ


ಹೈದರಾಬಾದ್​ನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯ ಕಂಡ ಈ ಪಂದ್ಯದಲ್ಲಿ 6 ವಿಕೆಟ್‌ ನಷ್ಟಕ್ಕೆ 316 ರನ್‌ ಗಳಿಸಿದ್ದಲ್ಲಿಂದ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್​ ತಂಡ 102.1 ಓವರ್​ ಬ್ಯಾಟಿಂಗ್​ ನಡೆಸಿ 420 ರನ್​ಗೆ ಆಲೌಟ್​ ಆಗುವ ಮೂಲಕ ಭಾರತಕ್ಕೆ 231 ರನ್​ಗಳ ಗೆಲುವಿನ ಗುರಿ ನೀಡಿತು.

ಇದನ್ನೂ ಓದಿ IND vs ENG: ಟೀಮ್​ ಇಂಡಿಯಾವನ್ನು ಮಣಿಸಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​

ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಭಾರತಕ್ಕೆ ಆಂಗ್ಲರು ಸ್ಪಿನ್​ ಅಸ್ತ್ರದ ಮೂಲಕ ಶಾಕ್​ ನೀಡಿದರು. ಪಂದ್ಯವನ್ನು 28 ರನ್​ಗಳಿಂದ ಗೆದ್ದು ಬೀಗಿದರು. ಭಾರತ 202 ರನ್​ಗೆ ಸರ್ವಪತನ ಕಂಡಿತು. ಉತ್ಕೃಷ್ಟ ಮಟ್ಟದ ಸ್ಪಿನ್​ ದಾಳಿ ನಡೆಸಿದ ಟಾಮ್ ಹಾರ್ಟ್ಲಿ 26.2 ಓವರ್​ ಎಸೆದು ಕೇವಲ 62 ರನ್​ ಬಿಟ್ಟುಕೊಟ್ಟು ಭಾರತದ ಕುಸಿತಕ್ಕೆ ಕಾರಣರಾದರು. ಒಟ್ಟು 7 ವಿಕೆಟ್​ ಕಿತ್ತು ಮಿಂಚಿದರು. ಇವರ ಸ್ನಿನ್​ ದಾಳಿಗೆ ತಡೆಯೊಡ್ಡುವಲ್ಲಿ ವಿಫಲವಾದ ಭಾರತೀಯ ಬ್ಯಾಟರ್​ಗಳು ತರಗೆಲೆಯಂತೆ ಉದುರಿ ಹೋದರು.

ಈ ಸೋಲಿನಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿಯೂ(WTC Points Table) ಭಾರತ ಮೂರು ಸ್ಥಾನಗಳ ಕುಸಿತ ಕಂಡಿದೆ. ಐಸಿಸಿ ಪ್ರತಿ ಟೆಸ್ಟ್​ ಪಂದ್ಯ ಮುಗಿದ ತಕ್ಷಣ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯನ್ನು ಪರಿಷ್ಕರಿಸಿ ಪ್ರಕಟ ಮಾಡುತ್ತದೆ. ಇಂಗ್ಲೆಂಡ್​ ವಿರುದ್ಧದ ಸೋಲುವ ಮುನ್ನ 2ನೇ ಸ್ಥಾನದಲ್ಲಿದ್ದ ಭಾರತ ಇದೀಗ ನೂತನ ಅಂಕಪಟ್ಟಿಯಲ್ಲಿ ಮೂರು ಸ್ಥಾನಗಳ ಕುಸಿತ ಕಂಡು 5ನೇ ಸ್ಥಾನಕ್ಕೆ ಜಾರಿದೆ. ಗೆಲುವು ದಾಖಲಿಸಿದ ಇಂಗ್ಲೆಂಡ್​ 21 ಪಾಯಿಂಟ್ಸ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಆದರೆ, ಸ್ಥಾನಗಳ ಏರಿಕೆ ಕಂಡಿಲ್ಲ. ಈ ಹಿಂದೆ ಇದ್ದ 8ನೇ ಸ್ಥಾನದಲ್ಲೇ ಕಾಣಿಸಿಕೊಂಡಿದೆ.

Exit mobile version