ನವದೆಹಲಿ: ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಕೆ ಕಂಡಿರುವ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಶೀಘ್ರದಲ್ಲೇ ತಂಡಕ್ಕೆ ಮರಳುವ ಸುಳಿವು ನೀಡಿದ್ದಾರೆ. ಶುಕ್ರವಾರ ಟ್ವಿಟರ್ನಲ್ಲಿ ಪೋಟೊವೊಂದನ್ನು ಹಂಚಿಕೊಂಡು “ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದ್ದೇನೆ” ಎಂದು ಹೇಳಿದ್ದಾರೆ.
2022ರ ಏಷ್ಯಾಕಪ್ ಸಂದರ್ಭದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ, 2022ರ ಟಿ20 ವಿಶ್ವಕಪ್‌ಗೂ ಅಲಭ್ಯರಾಗಿದ್ದರು. ಸುದೀರ್ಘ ಅವಧಿಯವರೆಗೆ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಅವರು ಇದೀಗ ಮತ್ತೆ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಸುಳಿವನ್ನು ಟ್ವಿಟರ್ ಪೋಸ್ಟ್ ಮೂಲಕ ನೀಡಿದ್ದಾರೆ. ಜತೆಗೆ ಜಡೇಜಾ ಕಮ್ಬ್ಯಾಕ್ ಬಗ್ಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಸುಳಿವು ನೀಡಿದ್ದಾರೆ.
ಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದ ಬಳಿಕ ಮಾತನಾಡಿದ ದ್ರಾವಿಡ್, ಜಡೇಜಾ ಸಂಪೂರ್ಣ ಚೇತರಿಸಿಕೊಂಡಿರುವುದು ಖುಷಿಯ ವಿಚಾರ. ತಂಡದಲ್ಲಿ ಒಬ್ಬ ಅನುಭವಿ ಆಲ್ರೌಂಡರ್ ಕೊರತೆ ಕಾಣುತ್ತಿದೆ ಎಂದು ಹೇಳುವ ಮೂಲಕ ಜಡೇಜಾ ಅವರನ್ನು ಶೀಘ್ರದಲ್ಲೇ ತಂಡ ಸೇರಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
ಒಂದೊಮ್ಮೆ ಜಡೇಜಾ ಲಂಕಾ ವಿರುದ್ಧದ ಏಕ ದಿನ ಸರಣಿಗೆ ಆಯ್ಕೆಯಾದರೂ ಅಚ್ಚರಿಯಿಲ್ಲ. ಏಕೆಂದರೆ ಗಾಯದಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಅವರನ್ನು ಕೆಲ ದಿನಗಳ ಹಿಂದೆ ತಂಡಕ್ಕೆ ಸೇರಿಸಿ ಪರಿಷ್ಕೃತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಇದೀಗ ಜಡೇಜಾ ವಿಚಾರದಲ್ಲಿಯೂ ಇದೇ ರೀತಿ ಸಂಭವಿಸಿದರೆ ಅಚ್ಚರಿ ಪಡಬೇಕಿಲ್ಲ.
ಸದ್ಯದ ಮಾಹಿತಿ ಪ್ರಕಾರ ಜಡೇಜಾ ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿ ವೇಳೆ ಟೀಮ್ ಇಂಡಿಯಾ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ | IND VS SL | ನಮ್ಮ ತಂಡದ ಬೌಲರ್ಗಳು ಕಲಿಕೆಯ ಹಾದಿಯಲ್ಲಿದ್ದಾರೆ, ಟೀಕಿಸುವುದು ಸರಿಯಲ್ಲ; ಕೋಚ್ ರಾಹುಲ್ ದ್ರಾವಿಡ್!