Site icon Vistara News

Ravindra Jadeja: ಕಪಿಲ್ ದೇವ್ ಜತೆ ಎಲೈಟ್​ ಪಟ್ಟಿ ಸೇರಿದ ರವೀಂದ್ರ ಜಡೇಜಾ

Ravindra Jadeja

ಹೈದರಾಬಾದ್​: ಇಂಗ್ಲೆಂಡ್​(IND vs ENG) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸದ್ಯ 2 ವಿಕೆಟ್​ ಕಿತ್ತ ರವೀಂದ್ರ ಜಡೇಜಾ(Ravindra Jadeja) ಅವರು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಸೇರಿ 550ನೇ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ. ಈ ಮೂಲಕ ಅನಿಲ್ ಕುಂಬ್ಳೆ, ಕಪಿಲ್ ದೇವ್ ಸೇರಿ ಹಲವು ದಿಗ್ಗಜರ ಜತೆ ಎಲೈಟ್​ ಪಟ್ಟಿ ಸೇರಿದ್ದಾರೆ.

ಓಲಿ ಪೋಪ್​ ಮತ್ತು ಜೋ ರೂಟ್​ ವಿಕೆಟ್​ ಕೀಳುವ ಮೂಲಕ ಜಡೇಜಾ ಈ ಮೈಲುಗಲ್ಲು ನಿರ್ಮಿಸಿದರು. ಈ ಮೂಲಕ 550 ವಿಕೆಟ್​ ಪೂರ್ತಿಗೊಳಿಸಿದ ಭಾರತದ 7ನೇ ಬೌಲರ್ ಎನಿಸಿಕೊಂಡರು. ಇಲ್ಲಿಯವರೆಗೆ ಅನಿಲ್ ಕುಂಬ್ಳೆ, ಕಪಿಲ್ ದೇವ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆರ್. ಅಶ್ವಿನ್ ಮತ್ತು ಜಾವಗಲ್​ ಶ್ರೀನಾಥ್ ಮಾತ್ರ ಈ ಸಾಧನೆ ಮಾಡಿದ್ದರು. ಇದೀಗ ಈ ಸಾಲಿಗೆ ಜಡೇಜಾ ಸೇರಿದ್ದಾರೆ. ಜಡೇಜಾ ಏಕದಿನದಲ್ಲಿ 220, ಟೆಸ್ಟ್​ನಲ್ಲಿ ​277*, ಟಿ20ಯಲ್ಲಿ 53 ವಿಕೆಟ್​ ಕಿತ್ತಿದ್ದಾರೆ.

ಜೋ ರೂಟ್​ ವಿರುದ್ಧ ಜಡೇಜಾ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 9ನೇ ಬಾರಿಗೆ ಜೋ ರೂಟ್ ಅವರನ್ನು ಮಾಡಿದ ದಾಖಲೆಯೂ ಜಡೇಜಾ ಪಾಲಿಗೆ ಸೇರಿತು. ರೂಟ್​ 29 ರನ್​ ಬಾರಿಸಿ ನಿರಾಸೆ ಮೂಡಿಸಿದರು.

ದಾಖಲೆ ಬರೆದ ಅಶ್ವಿನ್​-ಜಡೇಜಾ ಜೋಡಿ


ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಇಂಗ್ಲೆಂಡ್​ ತಂಡಕ್ಕೆ ಆರ್​.ಅಶ್ವಿನ್​ ಅವರು ಆರಂಭಿಕ ಆಘಾತವಿಕ್ಕಿದರು. ಉತ್ತಮವಾಗಿ ಬ್ಯಾಟಿಂಗ್​ ನಡೆಸುತ್ತಿದ್ದ ಬೆನ್ ಡಕೆಟ್​ (35) ವಿಕೆಟ್​ ಕಿತ್ತರು. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಅವರು ಓಲಿ ಪೋಪ್ (1) ವಿಕೆಟ್ ಉರುಳಿಸಿದರು. ಈ ಎರಡು ವಿಕೆಟ್​ ಪತನಗೊಂಡ ತಕ್ಷಣ ಈ ಜೋಡಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆಯಿತು. ಟೀಮ್ ಇಂಡಿಯಾ ಪರ ಟೆಸ್ಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಜೋಡಿ ಎಂಬ ಹಿರಿಮೆಗೆ ಪಾತ್ರವಾಯಿತು.

ಇದನ್ನೂ ಓದಿ IND vs ENG: ಟೆಸ್ಟ್​ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಜಡೇಜಾ-ಅಶ್ವಿನ್ ಜೋಡಿ


ಇದಕ್ಕೂ ಮುನ್ನ ಈ ದಾಖಲೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. ಕುಂಬ್ಳೆ ಮತ್ತು ಹರ್ಭಜನ್ ಜೋಡಿ 54 ಪಂದ್ಯಗಳಲ್ಲಿ 501 ವಿಕೆಟ್‌ ಉರುಳಿಸಿದ್ದರು. ಆದರೆ ಇದೀಗ ಜಡೇಜ-ಅಶ್ವಿನ್​ ಜೋಡಿ 502* ವಿಕೆಟ್ ಕಿತ್ತು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ.

ವಿಶ್ವ ದಾಖಲೆ ಇರುವುದು ಇಂಗ್ಲೆಂಡ್​ ತಂಡದ ಜೇಮ್ಸ್​ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿ. ಈ ಜೋಡಿ 138 ಟೆಸ್ಟ್ ಪಂದ್ಯಗಳನ್ನಾಡಿ ಬರೋಬ್ಬರಿ 1039 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಸದ್ಯಕ್ಕೆ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಅಸಾಧ್ಯ ಎನ್ನಬಹುದು. ಇದು ವಿಶ್ವ ದಾಖಲೆಯಾಗಿಯೇ ಉಳಿಯುವ ಸಾಧ್ಯತೆ ಇದೆ.

ಉಭಯ ತಂಡಗಳ ಆಡುವ ಬಳಗ


ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಕೆ.ಎಸ್‌. ಭರತ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಅಕ್ಷರ್​ ಪಟೇಲ್​, ಮೊಹಮ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ರೇಹಾನ್‌ ಅಹ್ಮದ್‌, ಮಾರ್ಕ್‌ ವುಡ್‌, ಟಾಮ್‌ ಹಾರ್ಟ್ಲಿ, ಜಾಕ್‌ ಲೀಚ್‌.

Exit mobile version