ಪಲ್ಲೆಕೆಲೆ: ನೇಪಾಳ(India vs Nepal) ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿ ಮೂರು ವಿಕೆಟ್ ಕಿತ್ತು ಮಿಂಚಿದ ರವೀಂದ್ರ ಜಡೇಜಾ(Ravindra Jadeja) ಏಷ್ಯಾಕಪ್ನಲ್ಲಿ(Asia Cup 2023) ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್(irfan pathan) ಅವರ 12 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸೋಮವಾರ ನಡೆದ ನೇಪಾಳ ವಿರುದ್ಧದ ಮಳೆ ಪೀಡಿತ ಪಂದ್ಯದಲ್ಲಿ ಒಟ್ಟು 10 ಓವರ್ ಬೌಲಿಂಗ್ ನಡೆಸಿದ ರವೀಂದ್ರ ಜಡೇಜಾ 40 ರನ್ ವೆಚ್ಚದಲ್ಲಿ ಮೂರು ವಿಕೆಟ್ ಕಿತ್ತರು. ಇದೇ ವೇಳೆ ಏಷ್ಯಾಕಪ್ನಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ಗಳ ಪಟ್ಟಿಯಲ್ಲಿ ಇರ್ಫಾನ್ ಪಠಾಣ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಪಠಾಣ್ 12 ಪಂದ್ಯಗಳನ್ನಾಡಿ 22 ವಿಕೆಟ್ ಕಡೆವಿದ್ದರು. ಇದು ಈವರೆಗಿನ ಏಷ್ಯಾಕಪ್ನಲ್ಲಿ ಭಾರತೀಯ ಬೌಲರ್ನ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಜಡೇಜಾ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಸದ್ಯ ಜಡೇಜಾ 16 ಪಂದ್ಯಗಳಿಂದ 22 ವಿಕೆಟ್ ಕಿತ್ತು ಜಂಟಿಯಾಗಿ 6ನೇ ಸ್ಥಾನ ಪಡೆದಿದ್ದಾರೆ.
ಮುರಳೀಧರನ್ ನಂ.1
ಮುಂದಿನ ಪಂದ್ಯದಲ್ಲಿ ಜಡೇಜಾ ಅವರು ಒಂದು ವಿಕೆಟ್ ಕಿತ್ತರೆ ಇರ್ಫಾನ್ ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರುವ ಅವಕಾಶ ಜಡೇಜಾಗೆ ಇದೆ. ಏಷ್ಯಾಕಪ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಅವರು 24 ಪಂದ್ಯ ಆಡಿ 30 ವಿಕೆಟ್ ಕೆಡವಿದ್ದಾರೆ. ದ್ವಿತೀಯ ಸ್ಥಾನ ಯಾರ್ಕರ್ ಕಿಂಗ್ ಲಸೀತ್ ಮಾಲಿಂಗ ಕಾಣಿಸಿಕೊಂಡಿದ್ದಾರೆ. ಮಾಲಿಂಗ 29 ವಿಕೆಟ್ ಪಡೆದಿದ್ದಾರೆ. ಲಂಕಾದ ಮತ್ತೊಬ್ಬ ಆಟಗಾರ ಅಜಂತಾ ಮೆಂಡಿಸ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 26 ವಿಕೆಟ್ ಪಡೆದಿದ್ದಾರೆ.
ಸಕ್ರಿಯ ಆಟಗಾರರಲ್ಲಿ ಜಡೇಜಾ ನಂ.1
ಸಕ್ರೀಯವಾಗಿ ಏಷ್ಯಾಕಪ್ ಆಡುತ್ತಿರುವ ಬೌಲರ್ಗಳ ಪಟ್ಟಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ರವೀಂದ್ರ ಜಡೇಜಾ ಹೆಸರಿನಲ್ಲಿದೆ. ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಜಡೇಜಾ ಬಳಿಕ 21 ವಿಕೆಟ್ ಪಡೆದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ ಘಾತಕ ವೇಗಿ ಶಾಹೀನ್ ಅಫ್ರಿದಿ 10 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ.
ಪಂದ್ಯ ಗೆದ್ದ ಭಾರತ
ಏಷ್ಯಾ ಕಪ್ (Asia Cup 2023) ಟೂರ್ನಿಯ ಲೀಗ್ ಹಂತದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 10 ವಿಕೆಟ್ ಸುಲಭ ಜಯ ದಾಖಲಿಸಿದೆ. ಮಳೆಯ ಅಡಚಣೆ ಹಾಗೂ ದುರ್ಬಲ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮಾ (74) ಹಾಗೂ ಶುಭ್ಮನ್ ಗಿಲ್ (67) ಅವರ ಅಬ್ಬರದ ಪ್ರದರ್ಶನ ಹಿನ್ನೆಲೆಯಲ್ಲಿ ಭಾರತಕ್ಕೆ ಗೆಲುವು ಲಭಿಸಿತು. ಈ ಗೆಲುವಿನೊಂದಿಗೆ ಗುಂಪು 1ರಲ್ಲಿರುವ ಭಾರತ ತಂಡ ಎರಡನೇ ತಂಡವಾಗಿ ಸೂಪರ್-4 ಹಂತಕ್ಕೆ ಪ್ರವೇಶ ಪಡೆಯಿತು. ಈ ಗುಂಪಿನಿಂದ ಪಾಕಿಸ್ತಾನ ತಂಡ ಈಗಾಗಲೇ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿದೆ.
ಇದನ್ನೂ ಓದಿ Asia Cup 2023 : ಏಷ್ಯಾ ಕಪ್ನ 5 ಪಂದ್ಯಗಳು ಏಕಾಏಕಿ ಬೇರೆ ಕಡೆಗೆ ಶಿಫ್ಟ್; ಎಲ್ಲಿಗೆ, ಯಾಕೆ?
ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 48.2 ಓವರ್ಗಳಲ್ಲಿ 230 ರನ್ಗಳಿಗೆ ಆಲ್ಔಟ್ ಆಯಿತು. ಭಾರತ ತಂಡ ಗುರಿ ಬೆನ್ನಟ್ಟಲು ಆರಂಭಿಸುತ್ತಿದ್ದಂತೆ ಮಳೆ ಆರಂಭವಾಯಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 23 ಓವರ್ಗಳಲ್ಲಿ 145 ರನ್ ಬಾರಿಸುವ ಸವಾಲು ಎದುರಾಯಿತು. ಬಾಂಗ್ಲಾದೇಶದ ಬೌಲರ್ಗಳನ್ನು ಪುಡಿಗಟ್ಟಿದ ರೋಹಿತ್ ಹಾಗೂ ಶುಭ್ಮನ್ 20.1 ಓವರ್ಗಳಲ್ಲಿ 147 ರನ್ ಬಾರಿಸಿ ಗೆಲುವು ತಂದುಕೊಟ್ಟರು.