ವಡೋದರ : ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಜಾಮ್‌ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕೆಲವು ದಿನಗಳ ಹಿಂದೆ ಕ್ರಿಕೆಟಿಗ ವಿಡಿಯೊವೊಂದನ್ನು ಬಿಡುಗಡೆ ಮಾಡಿ ತಮ್ಮ ಪತ್ನಿಯನ್ನು ಬೆಂಬಲಿಸಿ ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದರು. ಈ ಮೂಲಕ ಅವರು ಗುಜರಾತ್‌ನ ಚುನಾವಣೆಯಲ್ಲಿ ಭಾಗಿಯಾಗಲು ಮುಂದಾಗಿದ್ದಾರೆ. ಅಂತೆಯೇ ಅವರು ಇದೀಗ ಪ್ರಧಾನಿ ಮೋದಿ ಹಾಗೂ ತಮ್ಮ ನಡುವಿನ ಮೊದಲ ಭೇಟಿಯ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.
೨೦೧೦ರಲ್ಲಿ ಭಾರತ ತಂಡದ ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಆಡಲು ತೆರಳಿದ್ದಾಗ ಜಡೇಜಾ ಅವರು ಮೋದಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದ್ದರು. ಈ ಕ್ಷಣವನ್ನು ಜಡೇಜಾ ಬಣ್ಣಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಹೋಗಿದ್ದಾಗ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ನನ್ನನ್ನು ನರೇಂದ್ರ ಮೋದಿ ಅವರಿಗೆ ಪರಿಚಯಿಸಿದ್ದರು. ಈ ವೇಳೆ ಮೋದಿ ಅವರು ಅತ್ಯಂತ ಆತ್ಮೀಯತೆಯಿಂದ ಮಾತನಾಡಿದ್ದರು. ಅಲ್ಲದೆ, ‘ಇವ ನಮ್ಮ ಹುಡುಗ, ಚೆನ್ನಾಗಿ ನೋಡಿಕೊ’ ಎಂದು ಧೋನಿಗೆ ಹೇಳಿದ್ದರು ಎಂದು ಜಡೇಜಾ ಹೇಳಿಕೊಂಡಿದ್ದಾರೆ.
ರವೀಂದ್ರ ಜಡೇಜಾ ಅವರು ಏಷ್ಯಾ ಕಪ್‌ಗಾಗಿ ಯುಎಇಗೆ ತೆರಳಿದ್ದ ವೇಳೆ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಇದೀಗ ಪುನಶ್ಚೇತನಕ್ಕೆ ಒಳಗಾಗಿದ್ದಾರೆ. ಏತನ್ಮಧ್ಯೆ ಅವರು ವಿಶ್ವ ಕಪ್‌ನಲ್ಲಿ ಆಡುವ ಅವಕಾಶ ನಷ್ಟ ಮಾಡಿಕೊಂಡಿದ್ದರು.
ಇದನ್ನೂ ಓದಿ | Gujarat Election | ಪತ್ನಿ ಪರ ಪ್ರಚಾರ ಶುರು ಮಾಡಿದ ಆಲ್‌ರೌಂಡರ್ ರವೀಂದ್ರ ಜಡೇಜಾ