ಮುಂಬಯಿ: ಭಾರತ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra jadeja) ಮಂಡಿಯ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಫಿಟ್ ಎನಿಸಿಕೊಂಡಿದ್ದಾರೆ. ಅವರು ಮುಂಬರುವ ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಆಡುವುದಕ್ಕೆ ಸಜ್ಜಾಗಿದ್ದಾರೆ. ಇದೀಗ ತಮಗಾದ ಗಾಯದ ಸಮಸ್ಯೆ ಹಾಗೂ ಸುಧಾರಿಸಿಕೊಂಡಿರುವ ಪರಿಯನ್ನು ಬಣ್ಣಿಸಿದ್ದಾರೆ. ಇದೇ ವೇಳೆ ಅವರು ಮತ್ತೆ ಟೀಮ್ ಇಂಡಿಯಾ ಜರ್ಸಿ ಧರಿಸಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.
”ಭಾರತ ತಂಡಕ್ಕೆ ಮರಳುವುದಕ್ಕೆ ನಾನು ಉತ್ಸುಕನಾಗಿದ್ದೇನೆ. ನಾನು ಮಂಡಿ ನೋವಿನ ಸಮಸ್ಯೆಯಿಂದ ಬಳಲಿದ್ದೆ ಹಾಗೂ ಸರ್ಜರಿ ಮಾಡುವುದು ಅನಿವಾರ್ಯವಾಯಿತು. ನಾನು ಕಳೆದ ಟಿ20 ವಿಶ್ವ ಕಪ್ ಮುಗಿಯುವ ಮೊದಲು ಸರ್ಜರಿಗೆ ಒಳಗಾಗುವುದೇ ಅಥವಾ ನಂತರ ಸರ್ಜರಿ ಮಾಡಿಸಿಕೊಳ್ಳುವುದೇ ಎಂಬ ಗೊಂದಲ ಉಂಟಾಗಿತ್ತು. ನನ್ನ ವೈದ್ಯರ ಜತೆ ಮಾತನಾಡಿದಾಗ ಅವರು ವಿಶ್ವ ಕಪ್ಗೆ ಮೊದಲೇ ಮಾಡಿಸಿಕೊಳ್ಳುವುದು ಸೂಕ್ತ ಎಂದು ಹೇಳಿದರು. ಒಂದು ವೇಳೆ ಮಾಡಿಕೊಳ್ಳದೇ ಹೋದರೂ ವಿಶ್ವ ಕಪ್ ಆಡುವುದು ಸಾಧ್ಯವಿಲ್ಲ ಎಂದು ಸಲಹೆ ಕೊಟ್ಟಿದ್ದರು. ಹೀಗಾಗಿ ತಕ್ಷಣ ಸರ್ಜರಿಗೆ ಒಳಗಾದೆ,” ಎಂಬುದಾಗಿ ಜಡೇಜಾ ಬಿಸಿಸಿಐ ಟಿವಿಯಲ್ಲಿ ಹೇಳಿದ್ದಾರೆ.
”ಐದು ತಿಂಗಳ ಬಳಿಕ ನಾನು ಭಾರತ ತಂಡದ ಜೆರ್ಸಿ ಧರಿಸುತ್ತಿದ್ದೇನೆ. ಈ ಅವಕಾಶಕ್ಕಾಗಿ ನಾನು ಭಾಗ್ಯವಂತ ಎಂದು ಅಂದುಕೊಳ್ಳುತ್ತೇನೆ. ಐದು ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಇರುವ ಮೂಲಕ ಸಾಕಷ್ಟು ಮಾನಸಿಕ ಗೊಂದಲಕ್ಕೆ ಒಳಗಾಗಿದೆ. ಹೀಗಾಗಿ ಪುನಶ್ಚೇತನದ ಅವಧಿಯಲ್ಲಿ ಸಮಸ್ಯೆ ಎದುರಿಸಿದೆ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Ravindra Jadeja | ಫೆಬ್ರವರಿ 1ರಂದು ರವೀಂದ್ರ ಜಡೇಜಾ ಫಿಟ್ನೆಸ್ ರಿಪೋರ್ಟ್ ಬಿಡುಗಡೆ
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಲ್ಲಿನ ಫಿಸಿಯೊಗಳು ಹಾಗೂ ತರಬೇತುದಾರರು ನನ್ನ ಮಂಡಿ ನೋವಿನ ಸಮಸ್ಯೆ ಸುಧಾರಣೆಗೆ ಸಾಕಷ್ಟು ಶ್ರಮ ವಹಿಸಿದರು. ಅವರು ಭಾನುವಾರವೂ ನನಗಾಗಿ ಬರುತ್ತಿದ್ದರು. ಇಲ್ಲಿಂದ ನನ್ನ ಸಮಸ್ಯೆ ಕೊನೆಯಾಗಿದೆ ಎಂದು ಅವರು ಹೇಳಿದ್ದಾರೆ.