ಬರ್ಮಿಂಗ್‌ಹ್ಯಾಮ್: ಟೀಮ್ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ೧೦೪ ರನ್ ಬಾರಿಸಿ ಔಟಾಗಿದ್ದಾರೆ. ಇದರೊಂದಿಗೆ ಅವರು ವಿದೇಶಿ ನೆಲದಲ್ಲಿ ಚೊಚ್ಚಲ ಶತಕ ಬಾರಿಸಿದಂತಾಯಿತು.
೩೩ ವರ್ಷದ ರವೀಂದ್ರ ಜಡೇಜಾ ಅವರು ೧೮೩ ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದರು. ಒಟ್ಟಾರೆಯಾಗಿ ಜಡೇಜಾ ಅವರದ್ದು ಟೆಸ್ಟ್ ಮಾದರಿಯಲ್ಲಿ ಇದು ಮೂರನೇ ಶತಕ. ಈ ಹಿಂದೆ ಮೊಹಾಲಿ ಹಾಗೂ ರಾಜ್‌ಕೋಟ್‌ನಲ್ಲಿ ತಲಾ ಒಂದು ಶತಕ ಬಾರಿಸಿದ್ದರು.
ಭಾರತ ಉತ್ತಮ ಮೊತ್ತ
ಜಡೇಜಾ ಅವರ ಶತಕದೊಂದಿಗೆ ಭಾರತ ತಂಡದ ಇಂಗ್ಲೆಂಡ್ ವಿರುದ್ಧ ಮರುನಿಗದಿಯಾಗಿರುವ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ೪೧೬ ರನ್ ಬಾರಿಸಿದೆ. ಮೊದಲ ದಿನದ ಅಂತ್ಯಕ್ಕೆ ೩೩೮ ರನ್ ಬಾರಿಸಿ ೭ ವಿಕೆಟ್ ಕಳೆದುಕೊಂಡಿದ್ದ ಭಾರತ ಆ ಮೊತ್ತಕ್ಕೆ ೭೮ ರನ್ ಸೇರಿಸಿತು. ಶನಿವಾರ ಎರಡನೇ ದಿನದ ಆಟದ ಆರಂಭದಲ್ಲಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಇಂಗ್ಲೆಂಡ್ ಬೌಲರ್‌ಗಳನ್ನು ಎದುರಿಸಿದರು. ಶಮಿ ೩೧ ಎಸೆತಗಳಲ್ಲಿ ೧೬ ಬಾರಿಸಿದರು.
ಬುಮ್ರಾ ಸ್ಫೋಟಕ ಬ್ಯಾಟಿಂಗ್
ಶಮಿ ಔಟಾದ ಬಳಿಕ ಬ್ಯಾಟಿಂಗ್ ಮಾಡಲು ಬಂದ ನಾಯಕ ಜಸ್‌ಪ್ರಿತ್ ಬುಮ್ರಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ೪ ಫೋರ್ ಹಾಗೂ ೨ ಸಿಕ್ಸರ್‌ಗಳೊಂದಿಗೆ ಅವರು ಅಜೇಯ ೩೧ ರನ್ ಬಾರಿಸಿದರು. ಅವರ ಬ್ಯಾಟಿಂಗ್ ಅಬ್ಬರದಿಂದಾಗಿ ಭಾರತ ತಂಡದ ಒಟ್ಟು ಮೊತ್ತ ೪೦೦ರ ಗಡಿ ದಾಟಿತು.
ಇನ್ನೂ ಓದಿ: Fielder ತಲೆ ಮೇಲೊಂದು ಕ್ಯಾಮೆರಾ: ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿ ಬಳಕೆ