Site icon Vistara News

RCB: ಆರ್​ಸಿಬಿ ಮಹಿಳಾ ತಂಡಕ್ಕೆ ನೂತನ ಕೋಚ್​ ಆಯ್ಕೆ; ಬದಲಾದಿತೇ ತಂಡದ ಭವಿಷ್ಯ?

Luke Williams

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡಕ್ಕೆ ನೂತನ ನಿರ್ದೇಶಕರ ನೇಮಕ ಮಾಡಿದ ಬೆನ್ನಲ್ಲೇ ಇದೀಗ ಮಹಿಳಾ ತಂಡಕ್ಕೆ ನೂತನ ಕೋಚ್​ ನೇಮಕ ಮಾಡಲಾಗಿದೆ. ಮಹಿಳಾ ಬಿಬಿಎಲ್ ಕೂಟದಲ್ಲಿ ಅತ್ಯಂತ ಯಶಸ್ಸಿನ ಕೋಚ್​ ಆಗಿರುವ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್(Luke Williams) ಮುಂದಿನ ಆವೃತ್ತಿಯಲ್ಲಿ ತಂಡದ ಕೋಚ್​ ಆಗಿರಲಿದ್ದಾರೆ.

ಬಿಬಿಎಲ್​ನಲ್ಲಿ ಯಶಸ್ವಿ ಕೋಚ್​

ಲ್ಯೂಕ್ ವಿಲಿಯಮ್ಸ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಬಿಎಲ್ ಟೂರ್ನಿಯಲ್ಲಿ ಅತ್ಯಂತ ಯಶಸ್ಸಿನ ಕೋಚ್​ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅಡಿಲೇಡ್ ಸ್ಟ್ರೈಕರ್ ಎರಡು ಬಾರಿ ರನ್ನರ್ ಅಪ್ ಮತ್ತು 2022-23ರ ಸೀಸನ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇವರ ಮಾರ್ಗದರ್ಶನದಲ್ಲಾದರೂ ಆರ್​ಸಿಬಿ ಹಣೆಬರಹ ಬದಲಾಗುತ್ತದಾ ಎಂದು ಕಾದು ನೋಡಬೇಕಿದೆ. ವಿಶ್ವ ದರ್ಜೆಯ ಆಟಗಾರರಿದ್ದರೂ ಕಳೆದ ಬಾರಿ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು.

“ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ ಫ್ರಾಂಚೈಸಿಯೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ. ಅವಕಾಶ ನೀಡಿದ ಫ್ರಾಂಚೈಸಿಗೆ ಧನ್ಯವಾದಗಳು. ಡಬ್ಲ್ಯುಪಿಎಲ್​ನ ಎರಡನೇ ಆವೃತ್ತಿ ಆರಂಭಕ್ಕೆ ಕಾತರನಾಗಿದ್ದೇನೆ. ತಂಡವನ್ನು ಯಶಸ್ಸಿನ ದಾರಿಗೆ ತರಲಿ ಶಕ್ತಿ ಮೀರಿ ಪ್ರಯತ್ನಿಸುವ” ಎಂದು ವಿಲಿಯಮ್ಸ್ ಹೇಳಿದ್ದಾರೆ.

ಪುರುಷರ ತಂಡಕ್ಕೆ ಬೊಬಾಟ್ ನಿರ್ದೇಶಕ

ಮುಂದಿನ ಋತುವಿನ ಐಪಿಎಲ್​ಗೆ ಆರ್​ಸಿಬಿ ಪುರುಷರ ತಂಡ ಹೊಸ ಕ್ರಿಕೆಟ್ ನಿರ್ದೇಶಕರನ್ನು ನೇಮಿಸಿದೆ. ಈ ಹಿಂದೆ ಮೈಕ್ ಹೆಸ್ಸನ್ ಅವರು ಹೊಂದಿದ್ದ ಜವಾಬ್ದಾರಿಯನ್ನು ಇನ್ನು ಮುಂದೆ ಇಂಗ್ಲೆಂಡ್ ಪುರುಷರ ತಂಡದ ಪ್ರದರ್ಶನ ನಿರ್ದೇಶಕರಾಗಿರುವ ಮೋ ಬೊಬಾಟ್ ಅವರು ನಿರ್ವಹಿಸಲಿದ್ದಾರೆ. ಐಪಿಎಲ್​ಗಾಗಿ ಬೊಬಾಟ್ ಮುಂದಿನ ವರ್ಷದ ಆರಂಭದಲ್ಲಿ ಇಸಿಬಿಯಲ್ಲಿ ತಮ್ಮ ಸ್ಥಾನವನ್ನು ತ್ಯಜಿಸಲು ನಿರ್ಧರಿಸಿದ್ದಾರೆ.

ಬೊಬಾಟ್ 2019 ರಿಂದ ಇಂಗ್ಲೆಂಡ್ ಕ್ರಿಕೆಟ್​​ ಕಾರ್ಯಕ್ಷಮತೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ . 12 ವರ್ಷಗಳ ಕಾಲ ಇಸಿಬಿ ಕ್ರಿಕೆಟ್​ ನಿರ್ವಹಣೆ ವ್ಯವಸ್ಥೆಯ ಭಾಗವಾಗಿದ್ದಾರೆ, ಈ ಸಮಯದಲ್ಲಿ ಇಂಗ್ಲೆಂಡ್ ಟಿ20 ಐ ಮತ್ತು ಏಕದಿನ ವಿಶ್ವಕಪ್​ಗಳನ್ನು ಎತ್ತಿಹಿಡಿದಿದೆ. ಇಂಗ್ಲೆಂಡ್ ತಂಡದ ಕೋಚ್ ಅವಧಿಯಲ್ಲಿ ಬೊಬಾಟ್ ಆ್ಯಂಡಿ ಫ್ಲವರ್ ಅವರೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಿದ್ದಾರೆ ಎಂದು ಆರ್​ಸಿಬಿ ತನ್ನ ಟ್ವಿಟರ್ ಪೋಸ್ಟ್​​ನಲ್ಲಿ ಬರೆದಿದೆ.

ಆರ್​ಸಿಬಿ ಪರ ಕೆಲಸ ಮಾಡಲು ಉತ್ಸುಕ

ಕ್ರಿಕೆಟ್ ನಿರ್ದೇಶಕನಾಗಿ ಆರ್ಸಿಬಿಗೆ ಸೇರಲು ನಾನು ಉತ್ಸುಕನಾಗಿದ್ದೇನೆ ಮತ್ತು ಹೆಮ್ಮೆಪಡುತ್ತೇನೆ. ಅವರಿಗೆ ಸೇವೆ ಸಲ್ಲಿಸುವುದು ದೊಡ್ಡ ಗೌರವ. ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಇಬ್ಬರೂ ಇತ್ತೀಚಿನ ವರ್ಷಗಳಲ್ಲಿ ಒದಗಿಸಿದ ಸ್ಥಿರತೆಯನ್ನು ಮುಂದುವರಿ ಸುವುದು ಮುಖ್ಯ, ಎಂದು ಬೊಬಾಟ್ ಹೇಳಿದರು.

ಈ ನೇಮಕದ ಬಗ್ಗೆ ಮಾತನಾಡಿದ ಫ್ರಾಂಚೈಸಿಯ ಅಧ್ಯಕ್ಷ ಪ್ರಥಮೇಶ್ ಮಿಶ್ರಾ, “ಆರ್​ಸಿಬಿ ಯಾವಾಗಲೂ ಪ್ರದರ್ಶನ ಆಧಾರಿತ ವಿಧಾನವನ್ನು ಕೇಂದ್ರೀಕರಿಸಿದೆ . ‘ಪ್ಲೇಬೋಲ್ಡ್’ ತತ್ವವನ್ನು ಪ್ರತಿಬಿಂಬಿಸುವ ಸಂಸ್ಕೃತಿಯನ್ನು ರಚಿಸುತ್ತದೆ. ಬೊಬಾಟ್​ ಈಗಾಗಲೇ ಇಂಗ್ಲೆಂಡ್​ನೊಂದಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

Exit mobile version