ಮುಂಬಯಿ: ಐಪಿಎಲ್ನ ನತದೃಷ್ಠ ತಂಡಗಳಲ್ಲಿ ಒಂದಾಗಿರುವ ಆರ್‌ಸಿಬಿ(RCB) ತಂಡ ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಏಕೆ ಎಂಬ ಸತ್ಯವನ್ನು ತಂಡದ ಮಾಚಿ ಆಟಗಾರ ಪಾರ್ಥಿವ್ ಪಟೇಲ್(Parthiv Patel) ರಿವೀಲ್ ಮಾಡಿದ್ದಾರೆ. ತಂಡದಲ್ಲಿ ಉತ್ತಮ ಸಂಸ್ಕೃತಿ ಇಲ್ಲದೇ ಇರುವುದೇ ಕಪ್ ಗೆಲ್ಲದಿರಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಆರ್‌ಸಿಬಿ(Royal Challengers Bengaluru) ತಂಡದಲ್ಲಿ ಆಡುತ್ತಿದ್ದ ದಿನಗಳನ್ನು ಸ್ಮರಿಸಿರುವ ಪಾರ್ಥಿವ್ ಪಟೇಲ್, “ನಾನೂ ಆರ್‌ಸಿಬಿ ತಂಡದಲ್ಲಿ ಹಲವು ವರ್ಷಗಳ ಕಾಲ ಆಡಿದ್ದೇನೆ. ಆ ತಂಡಕ್ಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಆದರೆ, ಆ ತಂಡದಲ್ಲಿ ಎಲ್ಲವೂ ವ್ಯಕ್ತಿ ಪೂಜೆಯ ಮೇಲೆ ನಿಂತಿದೆ. ಕೆಲವೇ ಕೆಲ ಸ್ಟಾರ್ ಆಟಗಾರರಿಗೆ ಮಾತ್ರ ವಿಶೇಷ ಸತ್ಕಾರ ನೀಡಲಾಗುತ್ತದೆ. ಈ ಆಟಗಾರರ ಸೇವೆಯ ಬಳಿಕವಷ್ಟೇ ತಂಡದ ಉಳಿದ ಆಟಗಾರರನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಇದನ್ನೂ ನಾನು ಕಣ್ಣಾರೆ ಕಂಡಿದ್ದೇನೆ” ಎಂದು ಹೇಳಿದ್ದಾರೆ.
“ಆರ್‌ಸಿಬಿ ತಂಡದಲ್ಲಿ ಸಂಸ್ಕೃತಿ ಎಂಬುದೇ ಇಲ್ಲ. ತಂಡದ ಪ್ರದರ್ಶನದ ಗಮನಿಸಿದರೆ ಎಲ್ಲವೂ ತಿಳಿಯುತ್ತದೆ. ಒಂದು ತಂಡವಾಗಿ ಆಡಲು ಬೇಕಾದ ಸಂಸ್ಕೃತಿ ಇಲ್ಲದೇ ಇರುವುದಕ್ಕೇ ಆರ್‌ಸಿಬಿ ಈವರೆಗೆ ಟ್ರೋಫಿ ಗೆದ್ದಿಲ್ಲ. ತಂಡದ ಎಲ್ಲ ಆಟಗಾರರನ್ನು ಒಂದೇ ರೀತಿಯಲ್ಲಿ ಕಂಡರೆ ಖಂಡಿತಾ ಕಪ್ ಗೆಲ್ಲುವುದು ಖಚಿತ” ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಪಾರ್ಥಿವ್ ಅವರ ಈ ಹೇಳಿಕೆಗೆ ನೆಟ್ಟಿಗರರು ಕಮೆಂಟ್ ಮಾಡಿದ್ದು, ದೊಡ್ಡ ಚಿಂತಕ, ಕ್ರಿಕೆಟ್ ವಿಮರ್ಶಕ, ದೇಶಿಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರ, ಯುವಕ, ಐಪಿಎಲ್ ಅನುಭವ ಹಾಗೂ ಆಟಗಾರರ ಸಾಮರ್ಥ್ಯದ ಅರಿವು ಹೊಂದಿರುವ ನೀವು ಏಕೆ ಆರ್‌ಸಿಬಿ ಮ್ಯಾನೆಜ್ಮೆಂಟ್ ಸೇರಿ ಉತ್ತಮ ಸಂಸ್ಕೃತಿಯ ವಾತಾವರಣ ನಿರ್ಮಾಣ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯಲಿದೆ. (IPL 2025) 18ನೇ ಆವೃತ್ತಿಯಲ್ಲಿ ಬೆಂಗಳೂರು ತಂಡದಲ್ಲಿ ಕೂಡ ದೊಡ್ಡ ಬದಲಾವಣೆಯೊಂದು ಸಂಭವಿಸುವ ಮುನ್ಸೂಚನೆಯೊಂದು ಲಭಿಸಿದೆ. ಈ ಹಿಂದೆ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ ಅವರನ್ನು ಕೈ ಬಿಟ್ಟು ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli)ಗೆ ಮತ್ತೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ IPL 2025: ಕೆಕೆಆರ್ ತಂಡದ ಮೆಂಟರ್ ಆಗಲಿದ್ದಾರಾ ರಾಹುಲ್ ದ್ರಾವಿಡ್?
ವಿರಾಟ್ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೂಕ್ತ ನಾಯಕನ ಸ್ಥಾನಕ್ಕೆ ಚೆನ್ನೈ ತಂಡದಲ್ಲಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ಖರೀದಿ ಮಾಡಿ ಅವರಿಗೆ ನಾಯಕತ್ವ ನೀಡಲಾಗಿತ್ತು.
ಕಳೆದ ಮೂರು ಸೀಸನ್ನಲ್ಲಿ ಡುಪ್ಲೆಸಿಸ್ ಆರ್‌ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್ ಮೂಲಕ 700ಕ್ಕೂ ಅಧಿಕ ರನ್ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್ ಎನಿಸಿಕೊಂಡಿದ್ದರು.