Site icon Vistara News

IPL 2024 : ಬೇಕಾಬಿಟ್ಟಿ ಆಡಿದ ಆರ್​ಸಿಬಿಗೆ ಹೀನಾಯ ಸೋಲು; ಕನ್ನಡಿಗ ಕೆ. ಎಲ್ ರಾಹುಲ್ ತಂಡಕ್ಕೆ ಜಯ

IPL 2024

ಬೆಂಗಳೂರು: ಬೇಜವಾಬ್ದಾರಿ ಆಟವನ್ನೇ ಧ್ಯೇಯವನ್ನಾಗಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಐಪಿಎಲ್​ 2024ನೇ (IPL 2024) ಆವೃತ್ತಿಯ 15ನೇ ಪಂದ್ಯದಲ್ಲಿ ಕನ್ನಡಿಗ ಕೆ. ಎಲ್​ ರಾಹುಲ್ (KL Rahul) ನೇತೃತ್ವದ ಲಕ್ನೊ ಸೂಪರ್ ಜೈಂಟ್ಸ್ ತಂಡದ ವಿರುದ್ಧ 28 ರನ್​ಗಳ ಹೀನಾಯ ಸೋಲು ಕಂಡಿದೆ. ಇದು ಆರ್​ಸಿಬಿ ಬಳಗಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ ಒಟ್ಟು ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲು. ಈ ಮೂಲಕ ಕಟ್ಟರ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಇದೇ ವೇಳೆ ಲಕ್ನೊ ಮೂಲದ ತಂಡ ಹಾಲಿ ಆವೃತ್ತಿಯಲ್ಲಿ ದೊರಕಿದ ಎರಡನೇ ವಿಜಯವಾಗಿದೆ. ಲಕ್ನೊ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿದ್ದರೆ, ಅದಕ್ಕಿಂತ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋತಿತ್ತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು. ಅಂತೆಯೆ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 181 ರನ್ ಬಾರಿಸಿತು. ಬೆಂಗಳೂರು ಸ್ಟೇಡಿಯಮ್​ನಲ್ಲಿ ಗೆಲ್ಲಬಹುದಾಗಿದ್ದ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ 19.4 ಓವರ್​ಗಳಲ್ಲಿ 153 ರನ್​ಗೆ ಆಲ್​ಔಟ್ ಆಗಿ 28 ರನ್​ಗಳ ಹೀನಾಯ ಸೋಲು ಕಂಡಿತು.

ಲಕ್ನೊ ತಂಡದ ಪರ ಬ್ಯಾಟಿಂಗ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ಕ್ವಿಂಟನ್​ ಡಿ ಕಾಕ್​ 80 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ನಿಕೋಲಸ್ ಪೂರನ್​ 21 ಎಸೆತಕ್ಕೆ 40 ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಬೌಲಿಂಗ್​ನಲ್ಲಿ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿದ ಎಕ್ಸ್​ಪ್ರೆಸ್ ವೇಗಿ ಮಯಾಂಕ್​ ಯಾದವ್​ ತನ್ನ 4 ಓವರ್​ಗಳ ಸ್ಪೆಲ್​ನಲ್ಲಿ ಕೇವಲ 4 ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಅವರಿಗೆ ಇದು ಸತತ ಎರಡನೇ ಬಾರಿ ಅತ್ಯುತ್ತಮ ಪ್ರದರ್ಶನವಾಗಿದೆ. ಪಂದ್ಯದಲ್ಲಿ ಲಕ್ನೊ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು ಎಂಬುದರ ಹೊರತಾಗಿಯೂ ಆರ್​ಸಿಬಿಯ ಆಟವೇ ಬೇಸರ ಮೂಡಿಸುವಂತಿತ್ತು. ಅನಗತ್ಯ ರನ್​ಔಟ್​ಗಳು, ಕೆಟ್ಟ ಫೀಲ್ಡಿಂಗ್, ದುರ್ಬಲ ಬೌಲಿಂಗ್​ ಆರ್​​ಸಿಬಿಯ ಮರ್ಯಾದೆ ಕಳೆಯಿತು.

ಇದನ್ನೂ ಓದಿ: Nicholas Pooran : ಐಪಿಎಲ್​ 2024ರ ಬೃಹತ್ ಸಿಕ್ಸರ್ ಬಾರಿಸಿದ ಪೂರನ್, ಇಲ್ಲಿದೆ ವಿಡಿಯೊ

ಕಳಪೆ ಬ್ಯಾಟಿಂಗ್​

ರಾಯಲ್​ ಚಾಲೆಂಜರ್ಸ್ ತಂಡ ಬೆಂಗಳೂರು ಸ್ಟೇಡಿಯಮ್​ನಲ್ಲಿ ಗೆಲ್ಲಬಹುದಾಗಿದ್ದ ಮೊತ್ತವನ್ನು ಬೆನ್ನಟ್ಟಲು ಮುಂದಾಗಿ ಅತ್ಯಂತ ಕಳಪೆಯಾಗಿ ಆಡಿತು. ವಿರಾಟ್ ಕೊಹ್ಲಿ 22 ರನ್​ ಬಾರಿಸಿ ಉತ್ತಮ ಆರಂಭ ನೀಡಲು ಯತ್ನಿಸಿದರೂ ಫಾಫ್​ ಡು ಪ್ಲೆಸಿಸ್ 19 ರನ್ ಬಾರಿಸಿ ಅನಗತ್ಯ ರನ್​ಔಟ್​ಗೆ ಒಳಗಾದರು. ರಜತ್ ಪಾಟೀದಾರ್ 21 ಎಸೆತಕ್ಕೆ 29 ರನ್​ ಬಾರಿಸಿ ಪ್ರಯೋಜನಕ್ಕೆ ಇಲ್ಲದ ಇನಿಂಗ್ಸ್ ಆಡಿದರು. ಮ್ಯಾಕ್ಸ್​ವೆಲ್ ಮತ್ತೆ ಸೊನ್ನೆ ಸುತ್ತಿದರೆ, 18 ಕೋಟಿ ಮೌಲ್ಯದ ಗ್ರೀನ್​ಗೆ ಯುವ ಬೌಲರ್ ಎಸೆತಕ್ಕೆ ಬೌಲ್ಡ್ ಆಗಿದ್ದೇ ಗೊತ್ತಾಗಲಿಲ್ಲ. ಅನುಜ್​ ರಾವತ್​ ಟೆಸ್ಟ್ ಪಂದ್ಯದಂತೆ ಆಡಿ 21 ಎಸೆತಕ್ಕೆ 11 ರನ್ ಬಾರಿಸಿ ಕಳಪೆಯಾಗಿ ಔಟಾದರು.

ಇಂಪ್ಯಾಕ್ಟ್​ ಪ್ಲೇಯರ್ ರೂಪದಲ್ಲಿ ಬಂದ ಮಹಿಪಾಲ್ ಲಾಮ್ರೋರ್​ 33 ರನ್ ಬಾರಿಸಿ ಇಂಪ್ಯಾಕ್ಟ್​​ ಆಗಲು ಯತ್ನಿಸಿದರು. ದಿನೇಶ್​ ಕಾರ್ತಿಕ್ ಗಳಿಕೆ ಕೇವಲ 4 ರನ್​

ಕ್ವಿಂಟನ್​ ಅರ್ಧಶತಕ

ಮೊದಲು ಬ್ಯಾಟ್ ಮಾಡಿದ ಲಕ್ನೊ ಉತ್ತಮ ಅರಂಭ ಪಡೆಯಿತು. ಮೊದಲ ವಿಕೆಟ್​ಗೆ 51 ರನ್ ಬಾರಿಸಿತು. ಕ್ವಿಂಟನ್ ಡಿ ಕಾಕ್​ 56 ಎಸೆತಕ್ಕೆ 80 ರನ್ ಬಾರಿಸಿದರು. ರಾಹುಲ್​ 20 ರನ್ ಕೊಡುಗೆ ಕೊಟ್ಟರು. ಪಡಿಕ್ಕಲ್​ 6 ರನ್​​ಗೆ ಔಟಾದರೂ ಸ್ಟೋಯ್ನಿಸ್ 24 ರನ್ ಬಾರಿಸಿದರು. ಅಂತಿಮವಾಗಿ ನಿಕೋಲಸ್ ಪೂರನ್ 21 ಎಸೆತಕ್ಕೆ 5 ಸಿಕ್ಸರ್ ಹಾಗೂ 1 ಫೋರ್ ಸಮೇತ 40 ರನ್ ಬಾರಿಸಿದರು.

Exit mobile version