ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ(M.Chinnaswamy Stadium) ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್(IPL 2024) 2024ರ 68ನೇ ಪಂದ್ಯದಲ್ಲಿ ಎಂಎಸ್ ಧೋನಿ ಅವರು ಬಾರಿಸಿದ 110 ಮೀಟರ್ ಸಿಕ್ಸರ್ ಸಿಎಸ್‌ಕೆ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಆರ್ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈಗೆ(RCB vs CSK) ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಪಂದ್ಯದಲ್ಲಿ 201ರನ್ ಗಡಿ ದಾಟಿಬೇಕಿತ್ತು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು ಪಂದ್ಯ ಗೆಲ್ಲದಿದ್ದರೂ ಕೂಡ ಪ್ಲೇ ಆಫ್ ಲೆಕ್ಕಾಚಾರದಲ್ಲಿ 201 ರನ್ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರು. ಈ ಗುರಿ ತಲುಪಲು ಚೆನ್ನೈಗೆ ಅಂತಿಮವಾಗಿ 6 ಎಸೆತಗಳಲ್ಲಿ 17 ರನ್ ತೆಗೆಯುವ ಸವಾಲು ಎದುರಾಯಿತು. ಈ ವೇಳೆ ಯಶ್ ದಯಾಳ್ ಎಸೆತ ಅಂತಿಮ ಓವರ್ನ ಮೊದಲ ಎಸೆತವನ್ನೇ ಧೋನಿ ಔಟ್ ಆಫ್ದಿ ಸ್ಟೇಡಿಯಂಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ 110 ಮೀ. ದೂರ ಚಿಮ್ಮಿತು. ಮುಂದಿನ ಎಸೆತದಲ್ಲಿಯೂ ಧೋನಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಬಳಿಕ ಎಸೆತ ನಾಲ್ಕು ಎಸೆತಗಳಲ್ಲಿಯೂ ದಯಾಳ್ ಹಿಡಿತ ಸಾಧಿಸಿ ಆರ್ಸಿಬಿಗೆ ಅಭೂತಪೂರ್ವ ಗೆಲುವು ತಂದು ಕೊಟ್ಟರು.
ಧೋನಿ ಸಿಕ್ಸರ್ನಿಂದ ಆರ್ಸಿಬಿ ಲಾಭವಾಯಿತು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಕೂಡ ಅವರು ತಿಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್, ‘ಧೋನಿ ಬಾರಿಸಿದ ಸಿಕ್ಸರ್ 110 ಮೀಟರ್ ಸಾಗಿ ಸ್ಟೇಡಿಯಂನಿಂದ ಹೊರಬಿದ್ದ ಕಾರಣ ಹೊಸ ಚೆಂಡನ್ನು ನೀಡಲಾಯಿತು. ಇದು ಒದ್ದೆಯಿಲ್ಲದ ಕಾರಣ ಬೌಲರ್ ಯಶ್ ದಯಾಳ್ಗೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಇದಕ್ಕೂ ಮುನ್ನ ಚೆಂಡು ಒದ್ದೆಯಾಗಿದ್ದ ಕಾರಣ ಬೌಲರ್ಗಳಿಗೆ ಸರಿಯಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟವಾಗಿತ್ತು. ಹೀಗಾಗಿ ನೋ ಬಾಲ್, ಫುಲ್ಟಾಸ್ ಸೇರಿ ವೈಡ್ ಎಸೆತಗಳು ಕಂಡುಬಂತು. ಹೊಸ ಚೆಂಡು ಸಿಕ್ಕಿದ್ದು ಆರ್ಸಿಬಿ ಗೆಲುವಿಗೆ ಸಹಾಯವಾಯಿತು” ಎಂದು ಹೇಳುವ ಮೂಲಕ ಧೋನಿ ಸಿಕ್ಸರ್ ತಮ್ಮ ತಂಡಕ್ಕೆ ವರದಾನವಾಯಿತು ಎಂದರು.
ಇದನ್ನೂ ಓದಿ RCB: ಆರ್ಸಿಬಿಯ ನಂಟು ಬಿಡದ ವಿಜಯ್ ಮಲ್ಯ; ಟ್ವೀಟ್ ಮೂಲಕ ಅಭಿನಂದನೆ
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್ ಎನಿಸಿಕೊಂಡಿತು.