ಬೆಂಗಳೂರು: ಫೈನಲ್ ಪಂದ್ಯಕ್ಕೂ ಮಿಗಿಲಾದ ಕಾತುಕ ಸೃಷ್ಟಿಸಿದ್ದ ಶನಿವಾರದ ಚೆನ್ನೈ ಮತ್ತು ಆರ್‌ಸಿಬಿ(RCB vs CSK) ನಡುವಣ ಪಂದ್ಯ ಜಿಯೋ ಸಿನಿಮಾದಲ್ಲಿ(jiocinema) 50 ಕೋಟಿ ವೀಕ್ಷಣೆ ಕಾಣುವ ಮೂಲಕ ದಾಖಲೆಯೊಂದನ್ನು ಬರೆದಿದೆ. ಐಪಿಎಲ್(IPL 2024) ಇತಿಹಾಸದಲ್ಲೇ ಡಿಜಿಟಲ್ ವೀಕ್ಷಣೆಯಲ್ಲಿ ಅತ್ಯಧಿಕ ವೀಕ್ಷಣೆ ಕಂಡ ಪಂದ್ಯವೆಂಬ ದಾಖಲೆ ನಿರ್ಮಿಸಿದೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಜವಾಬಿತ್ತ ಚೆನ್ನೈ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು.
ಅದರಲ್ಲೂ ಅಂತಿಮ ಓವರ್ ವೇಳೆಗೆ ವೀಕ್ಷಕರ ಸಂಖ್ಯೆ ಒಂದೇ ಕ್ಷಣ ಏರಿಕೆ ಕಂಡಿತು. ಚೆನ್ನೈಗೆ(RCB vs CSK) ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಪಂದ್ಯದಲ್ಲಿ 201ರನ್ ಗಡಿ ದಾಟಿಬೇಕಿತ್ತು. ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಮತ್ತು ಧೋನಿ ಸೇರಿಕೊಂಡು ಪಂದ್ಯ ಗೆಲ್ಲದಿದ್ದರೂ ಕೂಡ ಪ್ಲೇ ಆಫ್ ಲೆಕ್ಕಾಚಾರದಲ್ಲಿ 201 ರನ್ ಬಾರಿಸಲು ಶಕ್ತಿ ಮೀರಿ ಪ್ರಯತ್ನಪಟ್ಟರು. ಈ ಗುರಿ ತಲುಪಲು ಚೆನ್ನೈಗೆ ಅಂತಿಮವಾಗಿ 6 ಎಸೆತಗಳಲ್ಲಿ 17 ರನ್ ತೆಗೆಯುವ ಸವಾಲು ಎದುರಾಯಿತು. ಈ ವೇಳೆ ಯಶ್ ದಯಾಳ್ ಎಸೆತ ಅಂತಿಮ ಓವರ್ನ ಮೊದಲ ಎಸೆತವನ್ನೇ ಧೋನಿ ಔಟ್ ಆಫ್ದಿ ಸ್ಟೇಡಿಯಂಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ 110 ಮೀ. ದೂರ ಚಿಮ್ಮಿತು. ಈ ವೇಳೆ ಪಂದ್ಯ ರೋಚಕ ಘಟ್ಟ ತಲುಪಿತು. 5 ಎಸೆತಗಳಲ್ಲಿ 11 ರನ್ ಬೇಕಿದ್ದಾಗ ಧೋನಿ ಮತ್ತೊಂದು ಸಿಕ್ಸರ್ಗೆ ಪ್ರಯತ್ನಪಟ್ಟರು. ಆದರೆ ಇದು ಬ್ಯಾಟ್ನ ತಳಭಾಗಕ್ಕೆ ಸಿಕ್ಕಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ 2 ಎಸೆತಕ್ಕೆ 10 ರನ್ ಬೇಕಿದ್ದಾಗ ಜಡೇಜಾ 2 ಬಾಲ್ ಡಾಡ್ ಮಾಡಿದರು. ಆರ್‌ಸಿಬಿ 27 ರನ್ಗಳ ಗೆಲುವು ಸಾಧಿಸಿ 4ನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶ ಪಡೆಯಿತು.
ಇದನ್ನೂ ಓದಿ RCB vs CSK: ಧೋನಿ ವರ್ತನೆಗೆ ‘ಇಟ್ ಹರ್ಟ್ಸ್’ ಎಂದ ಆರ್‌ಸಿಬಿ ಅಭಿಮಾನಿಗಳು; ಧೋನಿ ಮಾಡಿದ ತಪ್ಪೇನು?
ಅಭಿಮಾನಿಗಳು ಈ ಪಂದ್ಯವನ್ನು ಅಕ್ಷರಶಃ ಫೈನಲ್ ಎಂದೇ ಪರಿಗಣಿಸಿದ್ದರು. ಆರ್‌ಸಿಬಿ ಗೆಲುವಿನ ಬಳಿಕ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಸಂಭ್ರಮಾಚರಣೆ ಕಂಡು ಬಂತು.
ಪಂದ್ಯ ಮುಕ್ತಾಯವಾದಾಗ ತಡರಾತ್ರಿಯಾಗಿದ್ದರೂ ಅಭಿಮಾನಿಗಳ ಸಡಗರಕ್ಕೆ ಕೊರತೆ ಇರಲಿಲ್ಲ. ಪುಟ್ಟ ಮಕ್ಕಳು ಸೇರಿದಂತೆ ಆರ್‌ಸಿಬಿ ಫ್ಯಾನ್ಸ್ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದರು. ಮಕ್ಕಳಂತೂ ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗುತ್ತಿರುವುದು ಕಂಡು ಬಂತು. ಚಿನ್ನಸ್ವಾಮಿ ಕ್ರೀಡಾಂಗಣದ ಎದುರಿನ ರಸ್ತೆ ಬ್ಲಾಕ್ ಮಾಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಇದು ನಿಜವಾದ ಹೊಸ ಅಧ್ಯಾಯ ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿದೆ.