Site icon Vistara News

RCB vs CSK: ಗೆದ್ದರೂ ಆರ್​ಸಿಬಿಗೆ ಪ್ಲೇ ಆಫ್​ ಖಚಿತವಲ್ಲ; ಹೀಗಿದೆ ರನ್​ರೇಟ್​ ಲೆಕ್ಕಾಚಾರ!

RCB vs CSK:

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನ(IPL 2024) ಹೈವೋಲ್ಟೇಜ್​ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಿದ್ಧವಾಗಿ ನಿಂತಿದೆ. ಆರ್​ಸಿಬಿ ಮತ್ತು ಚೆನ್ನೈ(RCB vs CSK) ತಂಡಗಳು ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪಂದ್ಯ ಕಣ್ತುಂಬಿಕೊಳ್ಳಲು ಈಗಾಗಲೇ ಅಭಿಮಾನಿಗಳು ಸ್ಟೇಡಿಯಂ ಸುತ್ತ ಕಿಕ್ಕಿರಿದು ಸೇರಿದ್ದಾರೆ. ಪ್ಲೇ ಆಫ್​ ಪ್ರವೇಶಕ್ಕೆ ಆರ್​ಸಿಬಿಗೆ ಗೆಲ್ಲಲೇ ಬೇಕಾದ ಪಂದ್ಯ ಇದಾಗಿದೆ. ಕೇವಲ ಗೆಲುವು ಮಾತ್ರ ಸಾಲದು. ಇಲ್ಲಿಯೂ ಕೂಡ ಕೆಲ ಲೆಕ್ಕಾಚಾರವಿದೆ.

ಕೇವಲ ಗೆಲುವು ಸಾಲದು


ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. 16 ಅಂಕ ಗಳಿಸಿ 4ನೇ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ. ಒಂದೊಮ್ಮೆ ಮಳೆ ಬಂದರೂ ಕೂಡ ಚೆನ್ನೈಗೆ ಯಾವುದೇ ಚಿಂತೆಯಿಲ್ಲ. ಒಂದು ಅಂಕದ ಲಾಭದಿಂದ ನೇರವಾಗಿ ಪ್ಲೇ ಆಫ್​ ಟಿಕೆಟ್​ ಪಡೆಯಲಿದೆ. ಆದರೆ ಆರ್​ಸಿಬಿಗೆ ಗೆಲುವಿನ ಜತೆಗೆ ರನ್​ರೇಟ್​ ಕೂಡ ಬಹುಮುಖ್ಯ.

ಹೌದು ನೆಟ್‌ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದೆ. ಹೀಗಾಗಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ. ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್​ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ.

ಇದನ್ನೂ ಓದಿ IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ

ಆರ್​ಸಿಬಿಗೆ ಮೇ 18ರ ನಂಬಿಕೆ


ವಿಶೇಷವೆಂದರೆ ಆರ್​ಸಿಬಿಗೆ ಮೇ 18 ಎನ್ನುವುದು ಬಹಳ ಅದೃಷ್ಟದ ದಿನವಾಗಿದೆ. ಹೌದು, ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ಈ ದಿನದಂದು ಆಡಿದ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಸ್ವಾರಸ್ಯವೆಂದರೆ ಚೆನ್ನೈ ವಿರುದ್ಧವೇ 2 ಗೆಲುವು ಸಾಧಿಸಿದೆ. ಹೀಗಾಗಿ ಇಂದು ಆರ್​ಸಿಬಿ ಗೆಲುವು ಸಾಧಿಸಬಹುದು ಎನ್ನುವುದು ಅಭಿಮಾನಿಗಳ ಬಲವಾದ ನಂಬಿಕೆ.

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ-ಚೆನ್ನೈ ದಾಖಲೆ


ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ಇದುವರೆಗೆ 10 ಪಂದ್ಯಗಳನ್ನು ಆಡಿವೆ. ಈ ಪೈಕಿ ಚೆನ್ನೈ ಐದರಲ್ಲಿ ಗೆದ್ದರೆ, ಆರ್​ಸಿಬಿ ನಾಲ್ಕರಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಲೆಕ್ಕಾಚಾರದಲ್ಲಿ ಚೆನ್ನೈ ಬಲಿಷ್ಠ ಎನ್ನಲಡ್ಡಿಯಿಲ್ಲ. ಇಲ್ಲಿ ನಡೆದ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ 6 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆಲುವು ಸಾಧಿಸಿದೆ. ಈ ಆವೃತ್ತಿಯ 6 ಪಂದ್ಯಗಳ ಪೈಕಿ ಸಮಾನಾಗಿ 3 ಬಾರಿ ಚೇಸಿಂಗ್​ ಮತ್ತು ಮೊದಲು ಬ್ಯಾಟಿಂಗ್​ ನಡೆಸಿದ ತಂಡಗಳು ಜಯಿಸಿದೆ.

ಸಬ್‌ ಏರ್‌ ಸಿಸ್ಟಮ್‌


ಎಷ್ಟೇ ಮಳೆಯಾದರೂ ಕೂಡ ಮಳೆ ನಿಂತ ಕೆಲವೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(M Chinnaswamy Stadium) ಪಂದ್ಯವನ್ನು ಆರಂಭಗೊಳ್ಳುವಂತೆ ಮಾಡುವ ವಿಶೇಷ ಸಬ್‌ ಏರ್‌ ಸಿಸ್ಟಮ್‌(SubAir facility) ತಂತ್ರಜ್ಞಾನ(SubAir facility Chinnaswamy)ವಿದೆ. ಸಬ್‌ ಏರ್‌ ಸಿಸ್ಟಮ್‌ ಅಳವಡಿಸಿಕೊಂಡ ವಿಶ್ವದ ಮೊದಲ ಕ್ರಿಕೆಟ್‌ ಕ್ರೀಡಾಂಗಣ ಎಂಬ ಖ್ಯಾತಿ ಚಿನ್ನಸ್ವಾಮಿ ಕ್ರೀಡಾಂಗಣದ್ದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರಿ ಮಳೆ ಸುರಿದರೆ 7 ನಿಮಿಷಗಳಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಿದ್ಧವಾಗಿರುತ್ತದೆ. ನೀರನ್ನು ಹೀರಿಕೊಂಡ ನಂತರ ಸಬ್‌ ಏರ್‌ ಯಂತ್ರದ ಮೂಲಕ ಅದೇ ಕೊಳವೆಗಳಲ್ಲಿ ಔಟ್‌ಫೀಲ್ಡ್‌ಗೆ ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನು ಒಣಗಿಸುವ ವ್ಯವಸ್ಥೆಯಿದೆ. ಒಂದೊಮ್ಮೆ ಮಳೆಯ ಆರ್ಭಟ ನಿಲ್ಲದೇ ಹೋದಲ್ಲಿ, ಆಗ ಎಷ್ಟೇ ದೊಡ್ಡ ತಂತ್ರಜ್ಞಾನವಿದ್ದರೂ ಇದು ಉಪಯೋಗಕ್ಕೆ ಬಾರದು. ಹೀಗಾಗಿ ಪಂದ್ಯದ ಅಳಿವು ಉಳಿವಿನ ಭವಿಷ್ಯ ಮಳೆಯ ಕೈಯಲ್ಲಿದೆ.

Exit mobile version