ಬೆಂಗಳೂರು: ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಚೆನ್ನೈ ಸೂಪರ್ ಕಿಂಗ್ಸ್(RCB vs CSK) ವಿರುದ್ಧದ ಪಂದ್ಯದಲ್ಲಿ 4 ಸಿಕ್ಸರ್ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಕೊಹ್ಲಿ ಈ ಬಾರಿ ಒಟ್ಟು 36 ಸಿಕ್ಸರ್ ಬಾರಿಸಿದ್ದಾರೆ.
ಎಂ. ಚಿನ್ನಸ್ವಾಮಿ(M.Chinnaswamy Stadium) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿಗೆ ವಿರಾಟ್ ಕೊಹ್ಲಿ ತಮ್ಮ ಮನಮೋಹಕ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸಿದರು. 29 ಎಸೆತಗಳಿಂದ 47 ರನ್ ಗಳಿಸಿ ಔಟಾಗುವ ಮೂಲಕ ಕೇವಲ 3 ಅಂತರದಿಂದ ಅರ್ಧಶತಕದಿಂದ ವಂಚಿತರಾದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ದಾಖಲಾಯಿತು.
ವಿರಾಟ್ ನಾಲ್ಕು ಸಿಕ್ಸರ್ ಬಾರಿಸುತ್ತಿದ್ದಂತೆ ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನಿಕೋಲಸ್ ಪೂರನ್(36 ಸಿಕ್ಸರ್) ಜತೆ ಜಂಟಿ ಅಗ್ರಸ್ಥಾನ ಪಡೆದರು. 35 ಸಿಕ್ಸರ್ ಬಾರಿಸಿ 2ನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಷೇಕ್ ಶರ್ಮ ನಾಳಿನ ಪಂದ್ಯದಲ್ಲಿ 2 ಸಿಕ್ಸರ್ ಬಾರಿಸಿದರೆ ಅಗ್ರಸ್ಥಾನ ಅವರ ಪಾಲಾಗಲಿದೆ.
ಈ ಬಾರಿ ಅತ್ಯಧಿಕ ಸಿಕ್ಸರ್ ಬಾರಿಸಿದ ಬ್ಯಾಟರ್ಗಳು
ವಿರಾಟ್ ಕೊಹ್ಲಿ-36 ಸಿಕ್ಸರ್
ನಿಕೋಲಸ್ ಪೂರನ್-36 ಸಿಕ್ಸರ್
ಅಭಿಷೇಕ್ ಶರ್ಮ-35 ಸಿಕ್ಸರ್
ಸುನೀಲ್ ನರೈನ್-34 ಸಿಕ್ಸರ್
ಇದನ್ನೂ ಓದಿ Virat Kohli: ರೋಹಿತ್ ಶರ್ಮ ರನ್ ದಾಖಲೆ ಮುರಿದ ಕಿಂಗ್ ಕೊಹ್ಲಿ
ಚೆನ್ನೈ ವಿರುದ್ಧದ ಪಂದ್ಯದಲ್ಲಿ 3 ರನ್ ಗಳಿಸುತ್ತಿದ್ದಂತೆ ಕೊಹ್ಲಿ ಅವರು ರೋಹಿತ್ ದಾಖಲೆಯೊಂದನ್ನು ಹಿಂದಿಕ್ಕಿದರು. ಐಪಿಎಲ್ನಲ್ಲಿ(IPL 2024) ಒಂದೇ ತಾಣದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂದ ದಾಖಲೆ ತಮ್ಮ ಹೆಸರಿಗೆ ಬರೆದರು. ರೋಹಿತ್ ವಾಂಖೆಡೆ ಸ್ಟೇಡಿಯಂನಲ್ಲಿ 2295 ರನ್ ಬಾರಿಸಿದ್ದರು. ಇದೀಗ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 3 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದು ಮಾತ್ರವಲ್ಲದೆ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿ 700 ರನ್ಗಳ ಗಡಿ ದಾಟಿದರು.
ನೆಟ್ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್ ಹೊಂದಿದೆ. ಹೀಗಾಗಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ. ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್‌ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ.
ಇಂಪ್ಯಾಕ್ಟ್ ನಿಯಮದ ಬಗ್ಗೆ ಕೊಹ್ಲಿ ಅಸಮಾಧಾನ
ಐಪಿಎಲ್ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್ ನಿಯಮದ(Impact Player) ಬಗ್ಗೆ ವಿರಾಟ್ ಕೊಹ್ಲಿ(Virat Kohli) ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧದ ಪಂದ್ಯಕ್ಕೂ ಮುನ್ನ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಕ್ರಿಕೆಟ್ನ ಸಮತೋಲನವನ್ನು ಹಾಳು ಮಾಡುತ್ತಿದೆ. ಮನರಂಜನೆ ಎನ್ನುವುದು ಕ್ರಿಕೆಟ್ನ ಒಂದು ಭಾಗವಾಗಿರಬೇಕು. ಆಟವೇ ಮನರಂಜನೆಯಾಗಬಾರದು. ಹಾಗಾದಲ್ಲಿ ಕ್ರಿಕೆಟ್ನ ನೈಜ ಸ್ವರೂಪ್ ಕಳೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಇಂಪ್ಯಾಕ್ಟ್ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ರೋಹಿತ್ ಶರ್ಮಾ ಅವರ ಮಾತನ್ನು ನಾನು ಒಪ್ಪುತ್ತೇನೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಆಟದಲ್ಲಿ ಸಮತೋಲನ ಉಳಿಯುತ್ತಿಲ್ಲ. ಇದು ಕ್ರಿಕೆಟಿಗರ ಭವಿಷ್ಯಕ್ಕೂ ಮಾರಕವಾಗಲಿದೆ. ಒಂದು ಇನಿಂಗ್ಸ್ ಆಡಿದ ಬಳಿಕ ಆತ, ಮೈದಾನ ತೊರೆಯಬೇಕು. ಇದರಿಂದ ಆತ ಕ್ರಿಕೆಟ್ ಎಂದರೆ ಏನು ಎಂಬುದನ್ನು ಕಲಿಯಲು ಸಾಧ್ಯವಿಲ್ಲ” ಎಂದು ಕೊಹ್ಲಿ ಹೇಳಿದರು.