Site icon Vistara News

RCB vs MI: ಅಭಿಮಾನಿಗಳ ಒತ್ತಾಸೆಗಾದರೂ ಮುಂಬೈ ವಿರುದ್ಧ ಗೆಲ್ಲಲಿ ಆರ್​ಸಿಬಿ​

RCB vs MI

ಮುಂಬಯಿ: ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs MI) ತಂಡ ಗುರುವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯವನ್ನಾದರೂ ಗೆಲ್ಲಲಿ ಎನ್ನುವುದು ಆರ್​ಸಿಬಿ ಅಭಿಮಾನಿಗಳ ಹಾರೈಕೆ ಮತ್ತು ಒತ್ತಾಸೆ.

ತವರಿನಲ್ಲಿ ಮುಂಬೈ ಬಲಿಷ್ಠ


ಆರಂಭದಲ್ಲಿ ಹ್ಯಾಟ್ರಿಕ್​ ಸೋಲಿಗೆ ತುತ್ತಾಗಿದ್ದ ಹಾರ್ದಿಕ್​ ಪಾಮಡ್ಯ ಸಾರಥ್ಯದ ಮುಂಬೈ ಇಂಡಿಯನ್ಸ್​ ತಂಡ ಗೆಲುವಿನ ಶುಭಾರಂ ಕಂಡದ್ದು ತವರಿನ ಪಂದ್ಯದಲ್ಲಿ. ಹೀಗಾಗಿ ಮುಂಬೈ ತವರಿನಲ್ಲಿ ಬಲಿಷ್ಠವಾಗಿದೆ. ಗಾಯದಿಂದ ಚೇತರಿಕೆ ಕಂಡು ಡೆಲ್ಲಿ ವಿರುದ್ಧ ಆಡಲಿಳಿದಿದ್ದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಇದೀಗ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಡಿಯುವ ವಿಶ್ವಾಸದಲ್ಲಿದ್ದಾರೆ. ಇದಕ್ಕಾಗಿ ನೆಟ್ಸ್​ನಲ್ಲಿ ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ ಕೂಡ ನಡೆಸಿದ್ದಾರೆ. ವಿಂಡೀಸ್​ ರೊಮಾರಿಯೊ ಶೆಫರ್ಡ್‌ ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಕಳೆದ ಪಂದ್ಯವೇ ಉತ್ತಮ ನಿದರ್ಶನ. ನೋರ್ಜೆ ಅವರು ಎಸೆತ ಇನಿಂಗ್ಸ್​ನ ಅಂತಿಮ ಓವರ್​ನ ಎಲ್ಲ ಎಸೆತಗಳನ್ನು ಬೌಂಡರಿ ಮತ್ತು ಸಿಕ್ಸರ್​ ಬಾರಿಸಿದ್ದರು.

ಆರ್​ಸಿಬಿ ತಂಡದಲ್ಲಿ ಬದಲಾವಣೆ ಖಚಿತ


ಆರ್​ಸಿಬಿ ತಂಡದಲ್ಲಿ ಆಟಗಾರರ ಬದಲಾವಣೆ ಮಾಡಬೇಕು ಎನ್ನುವ ಕೂಗು ಸ್ವತಃ ತಂಡದ ಅಭಿಮಾನಿಗಳಿಂದಲೇ ಕೇಳಿ ಬಂದಿದೆ. ಸ್ಟಾರ್​ ಆಟಗಾರರಿದ್ದರೂ ಕೂಡ ಅವರನ್ನು ಬೆಂಚ್​ ಕಾಯಿಸುತ್ತಿರುವ ತಂಡದ ಮ್ಯಾನೇಜ್​ಮೆಂಟ್ ವಿರುದ್ಧ ಭಾರೀ ಟೀಕೆ ಕೇಳಿ ಬಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಆರ್​ಸಿಬಿ ಆಡುವ ಬಳಗದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.​ 25 ವರ್ಷದ ಸ್ಟಾರ್​ ಆಲ್​ರೌಂಡರ್​ ವಿಲ್ ಜ್ಯಾಕ್ಸ್ ಚೊಚ್ಚಲ ಐಪಿಎಲ್​ ಆಡುವ ನಿರೀಕ್ಷೆಯಲ್ಲಿದ್ದಾರೆ. ಇವರಿಗಾಗಿ ಕ್ಯಾಮರೂನ್​ ಗ್ರೀನ್ ಜಾಗ ಬಿಡಬೇಕಾದೀತು. ಮ್ಯಾಕ್ಸ್​ ವೆಲ್​ ಕೂಡ ಅವಕಾಶ ಪಡೆಯುವುದು ಅನುಮಾನ ಎನ್ನಲಾಗಿದೆ. ಇವರ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ಲಾಕಿ ಫರ್ಗ್ಯುಸನ್​ ಕಣಕ್ಕಿಳಿಯಬಹುದು.

ಇದನ್ನೂ ಓದಿ IPL 2025 Mega Auction: ಮೆಗಾ ಹರಾಜಿನಲ್ಲಿ 8 ಆಟಗಾರರ ರಿಟೇನ್​ಗೆ ಪಟ್ಟು ಹಿಡಿದ ಫ್ರಾಂಚೈಸಿಗಳು

ಕೊಹ್ಲಿ ಏಕಾಂಗಿ ಹೋರಾಟ


ಆಡಿದ 5 ಪಂದ್ಯಗಳ ಪೈಕಿ 4 ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮಾತ್ರ ತಂಡಕ್ಕೆ ನೆರವಾಗಿದ್ದು. ಉಳಿದ ಯಾವುದೇ ಆಟಗಾರನು ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿಲ್ಲ. ಬೌಲಿಂಗ್​ ಅಂತೂ ತೀರಾ ಕಳಪೆ ಮಟ್ಟದಾಗಿದೆ. ಅನುಭವಿ ಸಿರಾಜ್​ ವಿಕೆಟ್​ ಲೆಸ್​ ಜತೆಗೆ ದುಬಾರಿಯಾಗಿ ಕಂಡುಬರುತ್ತಿದ್ದಾರೆ. ತಂಡಕ್ಕೆ ದೊಡ್ಡ ಹಿನ್ನಡೆ ಸೂಕ್ತ ಸ್ಪಿನ್ನರ್​ ಇಲ್ಲದೆ ಇರುವುದು. ರಜತ್​ ಪಾಟೀದಾರ್​ ಪ್ರತಿ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದರೂ ಕೂಡ ಅವರಿಗೆ ಪದೇಪದೆ ಅವಕಾಶ ನೀಡುತ್ತಿರುವುದು ಕೂಡ ಸೋಲಿಗೆ ಕಾರಣ. ಕೊಹ್ಲಿ ತಂಡಕ್ಕೆ ನೆರವಾದರೂ ಕೂಡ ಅವರ ಬ್ಯಾಟಿಂಗ್​ ವೇಗಕ್ಕೆ ಚುರುಕು ಮುಟ್ಟಿಸಬೇಕಿದೆ.

ಮುಖಾಮುಖಿ


ಐಪಿಎಲ್​ನ ಬದ್ಧ ಎದುರಾಳಿಗಳೆಂದು ಕರೆಯಲ್ಪಡುವ ಮುಂಬೈ ಮತ್ತು ಬೆಂಗಳೂರು ಇದುವರೆಗೆ 32 ಐಪಿಎಲ್ ಪಂದ್ಯಗಳನ್ನು ಆಡಿದೆ. ಆರ್​ಸಿಬಿ ಈ ಪೈಕಿ 14 ಮತ್ತು ಮುಂಬೈ 18 ಪಂದ್ಯಗಳನ್ನು ಗೆದ್ದಿದೆ. ಆರ್​ಸಿಬಿ ತಂಡ ಮುಂಬೈ ವಿರುದ್ಧ ಗಳಿಸಿದ ಇದುವರೆಗಿನ ಗರಿಷ್ಠ ಮೊತ್ತ 235 ಆಗಿದೆ, ಮತ್ತು ಆರ್​ಸಿಬಿ ವಿರುದ್ಧ ಮುಂಬೈನ ಅತ್ಯಧಿಕ ಸ್ಕೋರ್ 213 ಆಗಿದೆ.

ಪಿಚ್​ ರಿಪೋರ್ಟ್​


ವಾಂಖೆಡೆ ಸ್ಟೇಡಿಯಂ ಸಾಮಾನ್ಯವಾಗಿ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸಲು ಸಹಾಯ ಮಾಡುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ ಇದನ್ನು ತಮ್ಮ ಅನುಕೂಲಕ್ಕೆ ತಕ್ಕ ರೀತಿಯಲ್ಲಿ ಬಳಸಿಕೊಂಡು ದೊಡ್ಡ ಸ್ಕೋರ್ ಮಾಡಿದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು. ಆದಾಗ್ಯೂ, ಸಂಜೆಯ ವೇಳೆ ಇಲ್ಲಿ ಇಬ್ಬನಿಯು ಸಮಸ್ಯೆ ಕಂಡು ಬರುವ ಕಾರಣ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ. ಇದುವರೆಗೆ 111 ಪಂದ್ಯಗಳಲ್ಲಿ 60 ಬಾರಿ ಚೇಸಿಂಗ್​ ನಡೆಸಿದ ತಂಡಗಳೇ ಇಲ್ಲಿ ಗೆದ್ದು ಬೀಗಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಫೀಲ್ಡಿಂಗ್​ಗೆ ಮೊದಲ ಆಧ್ಯತೆ ನಿಡಲಿದೆ. ಈ ಪಿಚ್​ನಲ್ಲಿ ವೇಗಿಗಳು ಇಲ್ಲಿಯವರೆಗೆ 887 ವಿಕೆಟ್‌ಗಳನ್ನು, ಸ್ಪಿನ್ನರ್‌ಗಳು 367 ವಿಕೆಟ್​ಗಳನ್ನು ಪಡೆದಿದ್ದಾರೆ. ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 169.

ಹವಾಮಾನ


ಪಂದ್ಯ ಆರಂಭವಾದಾಗ ಮುಂಬೈನಲ್ಲಿ ತಾಪಮಾನ ಸುಮಾರು 30 ಡಿಗ್ರಿ ಇರಲಿದೆ. ಪಂದ್ಯದ ಅಂತ್ಯದ ವೇಳೆಗೆ ಇದು 28 ಡಿಗ್ರಿಗಳಿಗೆ ಇಳಿಯಲಿದೆ. ಹಗಲಿನಲ್ಲಿ 31 ಡಿಗ್ರಿ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಸಂಭಾವ್ಯ ತಂಡ


ಮುಂಬೈ ಇಂಡಿಯನ್ಸ್​:
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್​ಪ್ರೀತ್​ ಬುಮ್ರಾ.

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನೂಜ್​ ರಾವುತ್​, ಲಾಕಿ ಫರ್ಗ್ಯುಸನ್, ವಿಲ್ ಜ್ಯಾಕ್ಸ್ , ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ಸೌರವ್ ಚೌಹಾಣ್, ರೀಸ್ ಟೋಪ್ಲಿ, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

Exit mobile version