ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ನೋಡಲು ಆರ್‌ಸಿಬಿ ಅಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದಾರೆ. ಕೊರೊನಾದ ಮೂರು ವರ್ಷಗಳ ಬಳಿಕ ಆರ್‌ಸಿಬಿ ತಂಡ ತವರಿನಲ್ಲಿ ಪಂದ್ಯವನ್ನಾಡುತ್ತಿದೆ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಇದೆ.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ಗೆ ಹೇಳಿ ಮಾಡಿಸಿದಂತೆ. ಇದು ಸಂಪೂರ್ಣ ಬ್ಯಾಟಿಂಗ್ ಸ್ನೇಹಿ ಪಿಚ್ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅತ್ಯಂತ ಸಮೀಪವಿರುವ ಕಾರಣ ಬ್ಯಾಟರ್ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್ ಬೀಸಬಹುದಾಗಿದೆ. ಆದರೆ ಬೌಲರ್ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿಬಹುದು.
ಮುಂಬೈ ಮುತ್ತು ಆರ್‌ಸಿಬಿ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯಗಳಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 17 ಪಂದ್ಯಗಳಲ್ಲಿ ಮುಂಬೈ ಮೇಲುಗೈ ಸಾಧಿಸಿದರೆ 13 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಮುಂಬೈ ಬಲಿಷ್ಠವಾಗಿದೆ.
ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ ಸಮಯ ವಿಸ್ತರಣೆ
ಬೆಂಗಳೂರಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ (IPL 2023) ದಿನದಂದು ಮೆಟ್ರೋ ಸಂಚಾರದ (Metro Timings) ಸಮಯವನ್ನು ಬಿಎಂಆರ್‌ಸಿಎಲ್ ವಿಸ್ತರಿಸಿದೆ. ಈ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ತಮ್ಮ ತಂಡವನ್ನು ಬೆಂಗಳಿಸುವ ಸಲುವಾಗಿ ಮೆಟ್ರೋ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: IPL 2023: ಕೇನ್ ವಿಲಿಯಮ್ಸನ್ ಐಪಿಎಲ್ನಿಂದ ಔಟ್; ಶೀಘ್ರದಲ್ಲೇ ಬದಲಿ ಆಟಗಾರನ ಆಯ್ಕೆ ಎಂದ ಫ್ರಾಂಚೈಸಿ
ಬೆಂಗಳೂರಲ್ಲಿ ಏಪ್ರಿಲ್ 2, 10, 17, 23, 26 ಹಾಗೂ ಮೇ 21ರಂದು ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ರಾತ್ರಿ ಕ್ರಿಕೆಟ್ ಪಂದ್ಯಾವಳಿ ನಡೆಯುವ ವೇಳೆ ಬೈಯಪ್ಪನಹಳ್ಳಿ – ಕೆಂಗೇರಿ ಮತ್ತು ನಾಗಸಂದ್ರ – ರೇಷ್ಮೆ ಟರ್ಮಿನಲ್‌ನಿಂದ ಕೊನೆಯ ರೈಲು ಸೇವೆಯು ಮಧ್ಯರಾತ್ರಿ 1 ಗಂಟೆ ಹೊರಡಲಿದ್ದು, ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಕೊನೇ ರೈಲು ಓಡಾಡಲಿದೆ. ಇತ್ತ ಹೊಸ ರೈಲು ಮಾರ್ಗವಾದ ವೈಟ್ ಫೀಲ್ಡ್ ಹಾಗೂ ಕೆ.ಆರ್. ಪುರ ನಡುವಿನ ರೈಲು ಸೇವೆಯನ್ನು ವಿಸ್ತರಿಸಲಾಗಿಲ್ಲ.