ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಂಪರು ಪರೀಕ್ಷೆ(Narco Test) ಹಾಗೂ ಸುಳ್ಳು ಪತ್ತೆ ಪರೀಕ್ಷೆಯ ಸವಾಲಿಗೆ ಸಿದ್ಧ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಸಾಕ್ಷಿ ಮಲಿಕ್ ಸೇರಿ ಪ್ರತಿಭಟನಾ ನಿರತ ಕುಸ್ತಿಪಟುಗಳು,”ತಪ್ಪಿತಸ್ಥರಲ್ಲ ಎಂಬ ವಿಶ್ವಾಸವಿದ್ದರೆ ಮಂಪರು ಪರೀಕ್ಷೆಗೆ ಒಳಗಾಗಿ, ಸುಳ್ಳು ಪತ್ತೆ ಪರೀಕ್ಷೆಯೂ ನಡೆಯಲಿ. ನಾವು ಕೂಡ ಈ ಎಲ್ಲ ಪರೀಕ್ಷೆಗಳಿಗೆ ಒಳಪಡಲು ಸಿದ್ಧರಿದ್ದೇವೆ. ಸತ್ಯ ಏನೆಂದು ಜಗತ್ತಿಗೆ ತಿಳಿಯಬೇಕಿದೆ” ಎಂದು ಬ್ರಿಜ್‌ಭೂಷಣ್‌ಗೆ ಸವಾಲು ಹಾಕಿದ್ದರು. ಆದರೆ ಈ ಬಗ್ಗೆ ಬ್ರಿಜ್ ಭೂಷಣ್ ಯಾವುದೇ ಹೇಳಿಕೆ ನೀಡಿರಲಿಲ್ಲ. ಇದೀಗ ತಾವು ಮಂಪರು ಪರೀಕ್ಷೆ ಸಿದ್ಧರಿರುವುದಾಗಿ ಹೇಳಿಕೆ ನೀಡಿದ್ದಾರೆ.
ಫೇಸ್ ಬುಕ್ ಪೋಸ್ಟ್ ಹಾಕಿರುವ ಬ್ರಿಜ್ ಭೂಷಣ್, “ನಾನು ನಾರ್ಕೋ ಪರೀಕ್ಷೆ, ಪಾಲಿಗ್ರಾಫ್ ಪರೀಕ್ಷೆ ಅಥವಾ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ, ಆದರೆ ನನ್ನದು ಒಂದು ಸವಾಲಿದೆ. ನನ್ನ ವಿರುದ್ಧ ಆರೋಪ ಮಾಡಿರುವ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕೂಡ ಅವುಗಳನ್ನು ಮಾಡಬೇಕು. ಇದನ್ನು ಒಪ್ಪಿದರೆ ನಾನು ಪರೀಕ್ಷೆಗೆ ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ Wrestlers Protest: ಕ್ಯಾಂಡಲ್ ಮಾರ್ಚ್ ನಡೆಸಲು ನಿರ್ಧರಿಸಿದ ಕುಸ್ತಿಪಟುಗಳು
ಮೇ 23 ಕ್ಯಾಂಡಲ್ ಮಾರ್ಚ್
ಕುಸ್ತಿಪಟುಗಳ ಪ್ರತಿಭಟನೆಗೆ ಮೇ 23 ರಂದು ಒಂದು ತಿಂಗಳು ಪೂರ್ಣಗೊಳ್ಳಲಿದೆ. ಇದೇ ದಿನ ಇಂಡಿಯಾ ಗೇಟ್‌ನಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಲು ಪ್ರತಿಭಟನಾ ಸಮಿತಿಯು ನಿರ್ಧರಿಸಿದೆ. ಮೇ 21ರ ಒಳಗಡೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಗುಡುವು ನೀಡಿದ್ದರು. ಆದರೆ ಅವರ ಬಂಧನವಾಗದ ಹಿನ್ನೆಲೆ ಇದೀಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಕೂಡ ಬೆಂಬಲ ಸೂಚಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ
ಕುಸ್ತಿಪಟುಗಳ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿ ಸ್ಪಂದನೆ ಸಿಗದ ಹಿನ್ನಲೆ ತಮ್ಮ ಪ್ರತಿಭಟನೆಯನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಕುಸ್ತಿಪಟುಗಳು ತೀರ್ಮಾನಿಸಿದ್ದಾರೆ. ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. “ದೆಹಲಿಯಲ್ಲಿ ಕಳೆದ ವರ್ಷ ನಡೆದ ರೈತ ಪ್ರತಿಭಟನೆಯ ರೀತಿಯಲ್ಲಿಯೇ ನಮ್ಮ ಪ್ರತಿಭಟನೆಯೂ ನಡೆಯಬಹುದು. ಈಗಾಗಲೇ ಖಾಪ್ ಪಂಚಾಯತ್ ಉನ್ನತ ಮಟ್ಟದ ಸಭೆಗಳನ್ನು ನಡೆಸಿವೆ. ಅವರ ನಿರ್ಧಾರಕ್ಕೆ ಅನುಸಾರವಾಗಿ ನಾವು ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ. ಇದು ದೇಶದ ಹಿತಾಸಕ್ತಿಗೆ ಗಾಸಿಯನ್ನು ಉಂಡುಮಾಡಲೂಬಹುದು” ಎಂದು ವಿನೇಶ್ ಫೋಗಟ್ ಎಚ್ಚರಿಕೆ ನೀಡಿದ್ದಾರೆ.