Site icon Vistara News

BCCI President | ಮೊನ್ನೆ ಮೊನ್ನೆ ಅಧ್ಯಕ್ಷರಾದ ಬಿನ್ನಿಗೆ ಬಂತು ಹಿತಾಸಕ್ತಿ ಸಂಘರ್ಷದ ನೋಟೀಸ್‌! ಯಾಕೆ?

Roger Binny

ಮುಂಬಯಿ : ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ ಯಾವುದೇ ಹುದ್ದೆ ಹೊಂದಿರುವ ವ್ಯಕ್ತಿಗಳು ಬೇರೊಂದು ಹುದ್ದೆಯಲ್ಲಿ ಇರಬಾರದು ಎಂಬ ನಿಯಮವಿದೆ. ಸುಪ್ರೀಮ್‌ ಕೋರ್ಟ್‌ ಆದೇಶದಂತೆ ರಚನೆಗೊಂಡ ಸಂವಿಧಾನ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ಇದೇ ವೇಳೆ ಬಿಸಿಸಿಐನ (BCCI President) ಹುದ್ದೆಯಲ್ಲಿರುವ ವ್ಯಕ್ತಿಯ ಸಂಬಂಧಿಕರು ಕೂಡ, ಬಿಸಿಸಿಐಗೆ ಜತೆ ಪಾಲುದಾರಿಕೆ ಪಡೆದುಕೊಂಡಿರುವ ಯಾವದೇ ಸಂಸ್ಥೆಯಲ್ಲಿ ಇರಬಾರದು ಎಂಬುದಾಗಿಯೂ ಹೇಳಲಾಗುತ್ತಿದೆ. ಸ್ವ ಹಿತಾಸಕ್ತಿಯ ಪ್ರಕರಣಗಳನ್ನು ತಡೆಗಟ್ಟಲು ಈ ನಿಯಮ ಜಾರಿಗೆ ತರಲಾಗಿದೆ. ಹೀಗಾಗಿ ಇಂಥದ್ದೊಂದು ಸುಳಿವು ಸಿಕ್ಕರೆ ಅವರಿಗೆ ನೋಟಿಸ್‌ ಗ್ಯಾರಂಟಿ.

ಇದೇ ಮಾದರಿಯ ನೋಟಿಸ್ ಒಂದು ಮೊನ್ನೆ ಮೊನ್ನೆ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರ್ನಾಟಕದ ಮಾಜಿ ಕ್ರಿಕೆಟಿಗ ರೋಜರ್‌ ಬಿನ್ನಿ ಅವರಿಗೆ ಬಂದಿದೆ. ಅದನ್ನು ನೀಡಿದ್ದು ಬಿಸಿಸಿಐ ನೈತಿಕ ಅಧಿಕಾರಿ. ಸಂಜೀವ್‌ ಗುಪ್ತಾ ಎಂಬುವರು ನೀಡಿದ ದೂರಿನ ಮೇರೆಗೆ ನೈತಿಕ ಅಧಿಕಾರಿ ವಿನೀತ್ ಸರನ್ ಅವರು ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ಡಿಸೆಂಬರ್‌ ೨೦ರೊಳಗೆ ಉತ್ತರ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.

ಯಾಕೆ ನೋಟಿಸ್‌?

ಸಂಜೀವ್‌ ಗುಪ್ತಾ ಅವರ ಆರೋಪದ ಪ್ರಕಾರ ರೋಜರ್ ಬಿನ್ನಿ ಅವರ ಪುತ್ರ ಸ್ಟವರ್ಟ್‌ ಬಿನ್ನಿಯ ಪತ್ನಿ ಮ್ಯಾಯಾಂತಿ ಲ್ಯಾಂಗರ್‌ ಸ್ಟಾರ್‌ ಸ್ಪೋರ್ಟ್ಸ್‌ ಟವಿಯಲ್ಲಿ ಕ್ರೀಡಾ ಪತ್ರಕರ್ತೆ. ಕ್ರಿಕೆಟ್‌ ಮ್ಯಾಚ್‌ಗಳು ನಡೆಯುವ ಸಂದರ್ಭದಲ್ಲಿ ಅವರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಸ್ಟಾರ್‌ ಸ್ಪೋರ್ಟ್‌ ನೆಟ್ವರ್ಕ್‌ ಬಿಸಿಸಿಐ ಗುತ್ತಿಗೆಯನ್ನು ಹೊಂದಿದ್ದು ಐಪಿಎಲ್‌ ಸೇರಿದಂತೆ ಭಾರತದಲ್ಲಿ ನಡೆಯುವ ಟೂರ್ನಿಗಳನ್ನು ನೇರ ಪ್ರಸಾರ ಮಾಡುತ್ತಿದೆ. ಈ ವಿಚಾರದಲ್ಲಿ ಬಿನ್ನಿ ಸ್ವಹಿತಾಸಕ್ತಿಯ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಆರೋಪಿಸಲಾಗಿದೆ.

ವಿಶ್ವ ಚಾಂಪಿಯನ್‌ ಸ್ವುವರ್ಟ್‌ ಬಿನ್ನಿ ಅವರಿಗೆ ನವೆಂಬರ್‌ ೨೧ರಂದು ನೋಟಿಸ್‌ ನೀಡಲಾಗಿದೆ. ಉತ್ತರಕ್ಕೆ ಒಂದು ತಿಂಗಳು ಅವಕಾಶ ನೀಡಲಾಗಿದೆ. ಬಿನ್ನಿ ಅವರು ಅಕ್ಟೋಬರ್‌ನಲ್ಲಿ ಬಿಸಿಸಿಐನ ೩೬ನೇ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.

ಇದನ್ನೂ ಓದಿ ವ| Roger Binny | ಬಿಸಿಸಿಐ ಮೇಲೆ ಐಸಿಸಿಗೆ ಒಲವಿದೆ ಎನ್ನುವುದು ಶುದ್ಧ ಸುಳ್ಳು; ರೋಜರ್​ ಬಿನ್ನಿ

Exit mobile version