Site icon Vistara News

ಪಾಕಿಗಳ ಎಲ್ಲ ಆರೋಪಗಳಿಗೆ ಪದಗಳಲ್ಲೇ ಅಟ್ಟಾಡಿಸಿ ಸಿಕ್ಸರ್​ ಹೊಡೆದ ಸೆಹವಾಗ್​

Virender Sehwag

ನವದೆಹಲಿ: ‘ಪಾಕಿಸ್ತಾನ್ ಜಿಂದಾಭಾಗ್! ಎಂದು ಪಾಕಿಸ್ತಾನವನ್ನು ಅಣಕವಾಡಿದ್ದ ವೀರೇಂದ್ರ ಸೆಹವಾಗ್​(Virender Sehwag)​ ಮತ್ತೆ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ. ಸುದೀರ್ಘ ವರದಿಯ ಟ್ವೀಟ್​ ಒಂದನ್ನು ಮಾಡಿ ಎಲ್ಲ ಆರೋಪಗಳಿಗೂ ತಕ್ಕ ಉತ್ತರ ನೀಡಿದ್ದಾರೆ. ಅವರ ಈ ಟ್ವೀಟ್​​ ವೈರಲ್ ಆಗಿದೆ.

“21ನೇ ಶತಮಾನದಲ್ಲಿ 6 ಏಕದಿನ ವಿಶ್ವಕಪ್‌ಗಳು ನಡೆದಿವೆ. 6 ಪ್ರಯತ್ನಗಳಲ್ಲಿ, 2007 ರಲ್ಲಿ ಒಮ್ಮೆ ಮಾತ್ರ ನಾವು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿಲ್ಲ. ಉಳಿದ ಎಲ್ಲ 5 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೆ ಅರ್ಹತೆ ಪಡೆದಿದ್ದೇವೆ. ಆದರೆ ಪಾಕಿಸ್ತಾನ ಈ ಅವಧಿಯಲ್ಲಿ 2011ರಲ್ಲಿ ಮಾತ್ರ ಸೆಮಿ ಅರ್ಹತೆ ಸಂಪಾದಿಸಿದೆ. ಉಳಿದ 5ರಲ್ಲಿ ಸೋಲು ಕಂಡಿದೆ. ನಿಮ್ಮ ಸಾಧನೆ ಏನಿದ್ದರೂ ಚೆಂಡು ಮತ್ತು ಪಿಚ್​ಗಳ ಬಗ್ಗೆ ಆರೋಪ ಮಾಡುವುದರಲ್ಲಿ ಮಾತ್ರ” ಎಂದು ಸೆಹವಾಗ್​ ಪಾಕ್​ಗೆ ಮತ್ತೆ ತಿವಿದಿದ್ದಾರೆ.

ಎಲ್ಲ ಆರೋಪಗಳಿಗೂ ತಕ್ಕ ಉತ್ತರ ನೀಡಿದ ಸೆಹವಾಗ್​

”ನಮ್ಮ ತಂಡ ಇತರ ತಂಡದ ವಿರುದ್ಧ ಸೋಲು ಕಂಡಾಗ ಅವರ ದೇಶದ ಪ್ರಧಾನಿಗಳು ನಮ್ಮನ್ನು ಅಣಕಿಸುತ್ತಾರೆ. ಆದರೆ ನಾವು ಈ ರೀತಿಯ ಮನಸ್ಥಿತಿ ಹೊಂದಿಲ್ಲ. ಈ ಬಾರಿ ವಿಶ್ವಕಪ್​ ಆಡಲು ಭಾರತಕ್ಕೆ ಬಂದಾಗ ಅವರನ್ನು ಅತ್ಯಂತ ಪ್ರೀತಿಯಿಂದಲೇ ಸ್ವಾಗತಿಸಿದ್ದೇವೆ. ಆದರೆ ಪಾಕ್ ಕ್ರಿಕೆಟ್​ ಮಂಡಳಿ ಅಧ್ಯಕ್ಷರು ಭಾರತವನ್ನು ಶತ್ರು ರಾಷ್ಟ್ರ ಎಂದು ಕರೆದು ಆ ಬಳಿಕ ನಮ್ಮಿಂದ ಪ್ರೀತಿಯನ್ನು ನಿರೀಕ್ಷಿಸುತ್ತಾರೆ. ಇದು ಪಾಕಿಸ್ತಾನದ ದ್ವಿಮುಖ ನೀತಿಯಾಗಿದೆ” ಎಂದು ಕುಟುಕಿದ್ದಾರೆ.

“ನಿಮ್ಮ ತಂಡದ ಆಟಗಾರರು ನಮ್ಮ ದೇಶದ ಸೈನಿಕರನ್ನು ಅಪಹಾಸ್ಯ ಮಾಡುತ್ತಿರುವ ಪೋಸ್ಟ್​ಗಳನ್ನು ಹಾಕಿದ್ದಾರೆ. ತಮ್ಮ ದ್ವೇಷಕ್ಕಾಗಿ ಪ್ರೀತಿಯನ್ನು ನಿರೀಕ್ಷಿಸುತ್ತಾರೆ. ಆದರೆ ನಾವು ಈ ಮನಸ್ಥಿತಿ ಹೊಂದಿಲ್ಲ. ನೀವು ಗೌರವಯುತವಾಗಿದ್ದರೆ ನಾವು ಕೂಡ ಗೌರವ ತೋರುತ್ತೇವೆ. ಅದು ಆನ್​ ಫೀಲ್ಡ್ ಆಗಿರಬಹುದು ಅಥವಾ ಆಫ್ ಫೀಲ್ಡ್ ನಲ್ಲಿಯೂ ಆಗಿರಬಹುದು” ಎಂದು ಟ್ವೀಟರ್​ ಎಕ್ಸ್​ ಖಾತೆಯಲ್ಲಿ ಸೆಹವಾಗ್​ ಬರೆದುಕೊಂಡಿದ್ದಾರೆ. ಈ ಮೂಲಕ ವಿಶ್ವಕಪ್​ ಅವಧಿಯಲ್ಲಿ ಭಾರತವನ್ನು ಟೀಕಿಸಿದ ಎಲ್ಲ ಪಾಕಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸೆಹವಾಗ್​ ಅವರ ಈ ಟ್ವೀಟ್​ಗೆ ಅನೇಕ ಭಾರತೀಯ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ನಿಮ್ಮ ಆಟದ ಶೈಲಿಯಂತೆಯೇ ಪಾಕಿಸ್ತಾನಕ್ಕೆ ಕುಟುಕಿದ್ದೀರ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ AFG vs SL: ಆಫ್ಘನ್​ ಆಟಕ್ಕೆ ಮನಸೋತ ಸೆಹವಾಗ್​; ಪೋಸ್ಟ್​ ಮೂಲಕ ಮೆಚ್ಚುಗೆ

ಬೈ ಬೈ ಪಾಕಿಸ್ತಾನ!

ಗುರುವಾರಷ್ಟೇ ವಿರೇಂದ್ರ ಸೆಹವಾಗ್​ ಅವರು ತಮ್ಮ ಟ್ವಿಟರ್​ ಎಕ್ಸ್​ ಮತ್ತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ‘ಬೈ ಬೈ ಪಾಕಿಸ್ತಾನ!’ ಎಂದು ಬರೆದಿರುವ ಫೋಟೊವನ್ನು ಹಾಕಿ ‘ಪಾಕಿಸ್ತಾನ್ ಜಿಂದಾಭಾಗ್! ಬಸ್ ಯಾಹಿಂ ತಕ್ ಥಾ ಜೋ ಥಾ(ನಿಮ್ಮ ಆಟ ಇಲ್ಲಿ ತನಕ ಮಾತ್ರ ಇತ್ತು). ನೀವು ಬಿರಿಯಾನಿ ಮತ್ತು ಆತಿಥ್ಯವನ್ನು ಆನಂದಿಸಿದ್ದೀರಿ ಎಂದು ಭಾವಿಸುತ್ತೇವೆ. ಸುರಕ್ಷಿತವಾಗಿ ಮನೆಗೆ ಹಿಂತಿರುಗಿ” ಎಂದು ಬರೆದು ಕಿಚಾಯಿಸಿದ್ದರು.

Exit mobile version