ಡೆಹ್ರಾಡೂನ್ : ಆಸ್ಪತ್ರೆ ಸೇರಿದ ವ್ಯಕ್ತಿಯ ಆರೋಗ್ಯ ವಿಚಾರಿಸಲು ಸಂಬಂಧಿಕರು ಹಾಗೂ ಹಿತೈಷಿಗಳು ಭೇಟಿ ನೀಡುವುದು ಮಾಮೂಲಿ. ಈ ರೀತಿಯಾಗಿ ಶುಭ ಹಾರೈಸಲು ಬರುವವರ ಸಂಖ್ಯೆ ಹೆಚ್ಚಾದರೆ ರೋಗಿಗೆ ಅದುವೇ ದೊಡ್ಡ ಸಮಸ್ಯೆ ಎನಿಸಬಹುದು. ಇದೇ ಪರಿಸ್ಥಿತಿ ಕಾರು ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿರುವ ರಿಷಭ್ ಪಂತ್ಗೆ (Rishabh Pant) ಎದುರಾಗಿದೆ. ಮಿತಿ ಮೀರಿ ಆಗಮಿಸುತ್ತಿರುವ ಬಂಧುಗಳಿಂದಾಗಿ ಪಂತ್ಗೆ ನಿದ್ದೆಯೇ ಇಲ್ಲದಂತಾಗಿದೆ.
ಶುಕ್ರವಾರ ಬೆಳಗ್ಗೆ ರಿಷಭ್ ಆಸ್ಪತ್ರೆ ಸೇರಿದ ಬಳಿಕದಿಂದ ರಾಜಕಾರಣಿಗಳು, ಉದ್ಯಮಿಗಳು, ಕ್ರಿಕೆಟ್ ಮಂಡಳಿಯ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಆಸ್ಪತ್ರೆಗೆ ಬರುತ್ತಿದ್ದಾರೆ. ಬರುವವರು ಬಹುತೇಕ ವಿಐಪಿಗಳು. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ವಿಧಿಯಿಲ್ಲದೆ ಅವರನ್ನು ಒಳಗೆ ಬಿಟ್ಟುಕೊಡುತ್ತಿದ್ದಾರೆ. ಆದರೆ, ವಿಶ್ರಾಂತಿಯ ಅಗತ್ಯವಿರುವ ಪಂತ್ಗೆ ಇದರಿಂದ ಕಿರುಕುಳ ಉಂಟಾಗುತ್ತಿದೆ. ಆಗುತ್ತಿರುವ ಸಮಸ್ಯೆಯನ್ನು ಬಾಯ್ಬಿಟ್ಟು ಹೇಳುವ ಸ್ಥಿತಿಯೂ ಇಲ್ಲ.
ತಮ್ಮ ಮಗನಿಗೆ ಆರೋಗ್ಯ ವಿಚಾರಿಸಲು ಬರುವ ಜನರಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ರಿಷಭ್ ಪಂತ್ ಅವರ ಕುಟುಂಬ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಹೊತ್ತು, ಗೊತ್ತು ಇಲ್ಲದೆ ಅವರೆಲ್ಲರೂ ಬಂದು ಮಾತುಕತೆ ನಡೆಸುತ್ತಿದ್ದಾರೆ. ಚಿಕಿತ್ಸೆ ಹಾಗೂ ಔಷಧದ ಪರಿಣಾಮ ಎದುರಿಸುತ್ತಿರುವ ರಿಷಭ್ಗೆ ವಿಶ್ರಾಂತಿಯ ಅಗತ್ಯವಿದೆ ಎಂಬುದನ್ನೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದಾಗಿಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಿಷಭ್ ಪಂತ್ ಅವರನ್ನು ಭಾನುವಾರ ಸಂಜೆ ವೇಳೆ ಏಕಾಏಕಿ ಐಸಿಯುನಿಂದ ಖಾಸಗಿ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ವೀಕ್ಷಕರ ಸಮಸ್ಯೆಯೇ ಆ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ | Rishabh Pant | ಅಪಘಾತದಿಂದ ಗಾಯಗೊಂಡಾಗಲೂ ತಾಯಿಯನ್ನೇ ಕನವರಿಸುತ್ತಿದ್ದ ರಿಷಭ್ ಪಂತ್!