Site icon Vistara News

ಲಾರ್ಡ್ಸ್‌ ಬಾಲ್ಕನಿಯಲ್ಲಿ ಗಂಗೂಲಿ ಶರ್ಟ್‌ ಬಿಚ್ಚಿ ಸಂಭ್ರಮಿಸಿದ ಸ್ಮರಣೀಯ ಕ್ಷಣಕ್ಕೆ ತುಂಬಿತು 21 ವರ್ಷ

Sourav Ganguly celebrating the Natwest Trophy triumph

ಬೆಂಗಳೂರು: ಲಾರ್ಡ್ಸ್‌ನಲ್ಲಿ(Lord’s Cricket Ground) ಭಾರತದ ಪಾಲಿಗೆ ಎರಡು ನೆನಪುಗಳು ಸದಾ ಹಸುರು. ಒಂದು, 1983ರಲ್ಲಿ ಕಪಿಲ್‌ದೇವ್‌ ಬಳಗ ಏಕದಿನ ವಿಶ್ವಕಪ್‌ ಚಾಂಪಿಯನ್‌ ಎನಿಸಿಕೊಂಡಿದ್ದು. ಇನ್ನೊಂದು, 2002ರ ನಾಟ್‌ವೆಸ್ಟ್‌ ಟ್ರೋಫಿ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 326 ರನ್‌ ಬೆನ್ನಟ್ಟಿ ಗೆದ್ದ ಬಳಿಕ ನಾಯಕ ಸೌರವ್‌ ಗಂಗೂಲಿ(Sourav Ganguly) ಅಂಗಿ ಕಳಚಿ ಸಂಭ್ರಮಿಸಿದ್ದು!

ಜುಲೈ 13, 2002ರಲ್ಲಿ ಭಾರತ ನಾಟ್‌ವೆಸ್ಟ್‌(2002 Natwest) ಚಾಂಪಿಯನ್‌ ಆಗಿ ಮೂಡಿ ಬಂದಿತ್ತು. ಈ ಸಂಭ್ರಮದ ವೇಳೆ ಗಂಗೂಲಿ(Sourav Ganguly) ಟೀಮ್‌ ಇಂಡಿಯಾದ ಜೆರ್ಸಿಯನ್ನು ತೆಗೆದು ಸಂಭ್ರಮಿಸಿದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಭಾರತದ ಈ ಮಹೋನ್ನತ ಸಾಧನೆಗೆ ಗುರುವಾರ 21 ವರ್ಷ ತುಂಬಿತು. ಈ ಸಂಭ್ರಮದ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಅಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಗಂಗೂಲಿ ಪಡೆಗೆ 326 ರನ್‌ ಬೃಹತ್‌ ಟಾರ್ಗೆಟ್‌. 14.2 ಓವರ್‌ಗಳಲ್ಲಿ 106 ರನ್‌ ಪೇರಿಸಿದ ಭಾರತದಿಂದ ದಿಟ್ಟ ಆರಂಭ. ಆದರೆ ಸ್ಕೋರ್‌ 146ಕ್ಕೆ ಏರುವಷ್ಟರಲ್ಲಿ 5 ವಿಕೆಟ್‌ ಪತನ. ಮುಂದಿನದು ಯುವರಾಜ್‌ ಸಿಂಗ್‌(Yuvraj Singh)-ಮೊಹಮ್ಮದ್‌ ಕೈಫ್(Mohammad Kaif) ಸಾಹಸಗಾಥೆ. 6ನೇ ವಿಕೆಟಿಗೆ 121 ರನ್‌ ಸಂಗ್ರಹ. ಯುವಿ ನಿರ್ಗಮಿಸುವಾಗ 50 ಎಸೆತಗಳಿಂದ ಇನ್ನೂ 59 ರನ್‌ ಅಗತ್ಯವಿತ್ತು. ಕೈಫ್​ಗೆ ಹರ್ಭಜನ್‌ ಸಿಂಗ್​ ಬೆಂಬಲ ನೀಡಿದರು. 47 ರನ್‌ ಹರಿದು ಬಂತು. 49ನೇ ಓವರಿನ 3ನೇ ಎಸೆತದಲ್ಲಿ ಭಾರತ ಗುರಿ ಮುಟ್ಟಿತು. ಅತ್ತ ಲಾರ್ಡ್ಸ್‌ ಬಾಲ್ಕನಿಯಲ್ಲಿ ಅಂಗಿ ಕಳಚಿ ನಾಯಕ ಗಂಗೂಲಿ ಸಂಭ್ರಮಾಚರಣೆ ಮಾಡಿ ಲಾರ್ಡ್ಸ್​ನಲ್ಲಿ ಆಂಗ್ಲರ ಗರ್ವಭಂಗ ಮಾಡಿದ್ದರು.

ಇದನ್ನೂ Team India : ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಹಿರಂಗಪಡಿಸಿದ ಸೌರವ್​ ಗಂಗೂಲಿ!

ಸೌರವ್​ ಗಂಗೂಲಿ ಹೀಗೆ ಅಂಗಿ ಕಳಚಿ ಸಂಭ್ರಮಿಸಲೂ ಒಂದು ಕಾರಣವಿದೆ. ಇದಕ್ಕೂ ಹಿಂದಿನ ಭಾರತ ಪ್ರವಾಸದ ವೇಳೆ ಇಂಗ್ಲೆಂಡ್‌ ಮುಂಬಯಿಯಲ್ಲಿ ನಡೆದ ಏಕದಿನ ಪಂದ್ಯ ಗೆದ್ದು ಸರಣಿಯನ್ನು 3-3 ಸಮಬಲಕ್ಕೆ ತಂದಾಗ ಆ್ಯಂಡ್ರೂ ಫ್ಲಿಂಟಾಫ್ ವಾಂಖೇಡೆಯಲ್ಲಿ ಇದೇ ರೀತಿ ವರ್ತಿಸಿದ್ದರು. ಇದೇ ಸೇಡನ್ನು ಲಾರ್ಡ್ಸ್‌ನಲ್ಲಿ ಗಂಗೂಲಿ ತೀರಿಸಿಕೊಂಡರು. ದಾದಾ ಅವರ ಈ ಸಂಭ್ರಮ ಇಂದಿಗೂ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಿದೆ.

ಹಿಂದೊಮ್ಮೆ ಈ ಘಟನೆಯ ಬಗ್ಗೆ ಗಂಗೂಲಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು, ಘಟನೆಯ ವೇಳೆ ಲಕ್ಷ್ಮಣ್‌ ನನ್ನ ಎಡ ಭಾಗದಲ್ಲಿದ್ದರು, ಹರ್ಭಜನ್‌ ನನ್ನ ಹಿಂದಿದ್ದರು. ನಾನು ಶರ್ಟ್‌ ತೆಗೆಯುತ್ತಿರುವುದನ್ನು ಕಂಡು ದಂಗಾದ ಲಕ್ಷ್ಮಣ್‌, ಬೇಡ, ಹಾಗೆ ಮಾಡ ಬೇಡ ಎಂದು ನನಗೆ ಹೇಳಲು ಪ್ರಯತ್ನಿಸುತ್ತಿದ್ದರು. ಆದರಡೆ ನಾನು ಅಂಗಿ ತೆಗೆದು ಸಂಭ್ರಮಿಸಿದೆ. ಈ ವರ್ತನೆಯಿಂದ ನನಗೂ ನಾಚಿಕೆಯಾಗಿದೆ. ಒಮ್ಮೆ ನನ್ನ ಮಗಳು ಕೂಡ ಇದನ್ನು ಪ್ರಶ್ನಿಸಿದ್ದಳು-ನೀನೇಕೆ ಹಾಗೆ ಮಾಡಿದೆ ಅಪ್ಪ, ಕ್ರಿಕೆಟ್‌ನಲ್ಲಿ ಹೀಗೆಲ್ಲ ಮಾಡಲೇಬೇಕೇ? ಎಂದು ಕೇಳಿದ್ದಳು. ಇಲ್ಲ, ಅರಿವಿಲ್ಲದೆ ಹೀಗೆ ಮಾಡಿದೆ ಎಂದು ಉತ್ತರಿಸಿದ್ದೆ ಎಂದು ಗಂಗೂಲಿ ಅಂದಿನ ವಿದ್ಯಮಾನವನ್ನು ವಿವರಿಸಿದ್ದರು.

Exit mobile version