ದುಬೈ : ಭಾರತ ಮಹಿಳೆಯರ ಕ್ರಿಕೆಟ್ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಟಿ೨೦ rank ಪಟ್ಟಿಯಲ್ಲಿ ಭರ್ಜರಿ ಬಡ್ತಿ ಪಡೆದುಕೊಂಡಿದ್ದು, ಅಗ್ರ ೨೦ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಸ್ವಿಂಗ್ ಬೌಲರ್ ಅಗ್ರ ೨೦ರೊಳಗೆ ಬರುತ್ತಿರುವುದು ಇದೇ ಮೊದಲು.
ಸೋಮವಾರ ಮುಕ್ತಾಯಗೊಂಡ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅವರು ನೀಡಿರುವ ಪ್ರದರ್ಶನದ ಹಿನ್ನೆಲೆಯಲ್ಲಿ ಅವರಿಗೆ ಬೌಲರ್‌ಗಳ ಪಟ್ಟಿಯಲ್ಲಿ ೧೦ ಸ್ಥಾನಗಳ ಬಡ್ತಿ ಸಿಕ್ಕಿದೆ. ಈ ಅವವರು ೧೮ನೇ rank ಪಡೆದುಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅವರು ಒಟ್ಟು ೧೧ ವಿಕೆಟ್‌ಗಳನ್ನು ಪಡೆದಿದ್ದರು. ಅದರಲ್ಲಿ ಎರಡು ಬಾರಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಕಾಮನ್ವೆಲ್ತ್ ಗೇಮ್ಸ್‌ನ ಗರಿಷ್ಠ ವಿಕೆಟ್ ಗಳಿಕೆದಾರರೆನಿಸಿಕೊಂಡಿದ್ದರು.
ಭಾರತದ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಒಟ್ಟು ೧೪೬ ರನ್‌ಗಳನ್ನು ಬಾರಿಸಿದ್ದು, ೨೦೨೧ರ ಬಳಿಕ ಅಗ್ರ ೧೦ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಬ್ಯಾಟರ್ ಬೆತ್ ಮೂನಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಫೈನಲ್‌ನಲ್ಲಿ ಅವರು ಭಾರತ ವಿರುದ್ಧ ೪೧ ಎಸೆತಗಳಿಗೆ ೬೧ ರನ್ ಬಾರಿಸಿದ್ದರು. ಈ ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿ ಬಂಗಾರ ಗೆದ್ದುಕೊಂಡಿತ್ತು.
ಇದನ್ನೂ ಓದಿ | CWG- 2022 | ಮಹಿಳೆಯರ ಕ್ರಿಕೆಟ್ ತಂಡಕ್ಕೆ ಬೆಳ್ಳಿ ಪದಕ, ಆಸ್ಟ್ರೇಲಿಯಾ ವಿರುದ್ಧ ವೀರೋಚಿತ ಸೋಲು