ದುಬೈ : ಭಾರತ ಹಾಗೂ ಪಾಕಿಸ್ತಾನ ತಂಡಗಳು ನಡುವಿನ ಏಷ್ಯಾ ಕಪ್ ಪಂದ್ಯಕ್ಕೆ (Asia Cup- 2022) ಕ್ಷಣಗಣನೆ ಆರಂಭಗೊಂಡಿದ್ದು, ಇತ್ತಂಡಗಳ ಆಟಗಾರರು ಸತತವಾಗಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎಲ್ಲರಿಗಿಂತ ಹೆಚ್ಚೇ ಬೆವರು ಸುರಿಸುತ್ತಿದ್ದಾರೆ. ಯಾಕೆಂದರೆ ಅವರಿಗೆ, ಈ ಪಂದ್ಯದ ಗೆಲುವಿನಷ್ಟೇ, ಬ್ಯಾಟಿಂಗ್ ಲಯಕ್ಕೆ ಮರಳುವುದು ಕೂಡ ಆದ್ಯತೆಯ ಸಂಗತಿಯಾಗಿದೆ. ಹೀಗಾಗಿ ತಂಡದ ಸಹ ಆಟಗಾರರ ಹಾಗೂ ನೆಟ್‌ಬೌಲರ್‌ಗಳನ್ನು ನಿರಂತರವಾಗಿ ಎದುರಿಸುತ್ತಿದ್ದಾರೆ. ಏತನ್ಮಧ್ಯೆ ಅವರು ಶನಿವಾರ ಅಭ್ಯಾಸ ನಡೆಸುವಾಗ ಆಸ್ಟ್ರೇಲಿಯಾ ತಂಡದ ಮ್ಯಾಕ್ಸ್‌ವೆಲ್ ರೀತಿಯಲ್ಲಿ ರಿವರ್ಸ್ ಸ್ವೀಪ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಕಲಾತ್ಮಕ ಕ್ರಿಕೆಟಿಗ. ಕ್ರಿಕೆಟಿಂಗ್ ಹೊಡೆತಗಳನ್ನು ಮಾತ್ರ ಅವರು ಬಾರಿಸುತ್ತಾರೆ. ಆಧುನಿಕ ಯುಗ ಬ್ಯಾಟರ್‌ಗಳ ರೀತಿಯಲ್ಲಿ ಹೇಗೇಗೋ ಬ್ಯಾಟ್ ಮಾಡುವ ಪರಿಪಾಠವನ್ನು ಅವರು ರೂಡಿಸಿಕೊಂಡಿಲ್ಲ. ಆದರೆ, ಈ ಬಾರಿ ಅವರು ಹಳೆಯ ಸಾಂಪ್ರದಾಯಿಕ ಶೈಲಿಯ ಬ್ಯಾಟಿಂಗ್ ಹೊರತುಪಡಿಸಿ ಬೇರೆ ಹೊಡೆತಗಳ ಮೂಲಕ ರನ್ ಗಳಿಸಲು ಆರಂಭಿಸಿದ್ದಾರೆ. ಹಾಗೆಯೇ ಅವರು ಶನಿವಾರ ಯಜ್ವೇಂದ್ರ ಚಹಲ್ ಅವರ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಆಟವನ್ನು ನೋಡಿದ ಚಹಲ್ ಬೆಕ್ಕಸ ಬೆರಗಾಗಿದ್ದರೆ, ಪಕ್ಕದಲ್ಲೇ ಇದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ ಮುಗುಳ್ನಗೆ ಬೀರಿದ್ದಾರೆ.
ಸತತವಾಗಿ ಪ್ರದರ್ಶನ ವೈಫಲ್ಯ ಕಾಣುತ್ತಿರುವ ವಿರಾಟ್ ಕೊಹ್ಲಿಗೆ ಏಷ್ಯಾ ಕಪ್ ಟೂರ್ನಿ ಫಾರ್ಮ್‌ಗೆ ಮರಳಲು ಕೊಟ್ಟಿಟರುವ ಕೊಟ್ಟ ಕೊನೆಯ ಅವಕಾಶದಂತಿದೆ. ಶುಕ್ರವಾರ ಸಂಜೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ “ವಿರಾಟ್ ಕೊಹ್ಲಿ ಭಾರತ ತಂಡಕ್ಕಾಗಿ ಮಾತ್ರವಲ್ಲ, ತಮಗಾಗಿಯೂ ಆಡಬೇಕಾಗಿದೆ,” ಎಂದು ಹೇಳಿದ್ದರು. ಹೀಗಾಗಿ ಕೊಹ್ಲಿ ಈ ಟೂರ್ನಿಯಲ್ಲಿ ಹೇಗಾದರೂ ಮಾಡಿ ತಾವು ಸಮರ್ಥನಿದ್ದೇನೆ ಎಂದು ಸಾಬೀತು ಮಾಡಿ ತೋರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ, ಎಂಎಸ್ ಧೋನಿ ವಿರುದ್ಧ ದೂರು ದಾಖಲಿಸಿದವರು ಜೀವ ಭಯದಿಂದ ವಾಪಸ್ ಪಡೆದರು!