Site icon Vistara News

ಒಲಿಂಪಿಕ್ಸ್‌ ಅರ್ಹತೆ ಪಡೆದ ರಿಥಂ ಸಂಗ್ವಾನ್​; ಭಾರತೀಯ ಶೂಟಿಂಗ್​ ವಿಭಾಗದಲ್ಲಿ ಸಾರ್ವಕಾಲಿಕ ದಾಖಲೆ

Asia Olympic Qualifiers

ಜಕಾರ್ತಾ: ಇಲ್ಲಿ ನಡೆಯುತ್ತಿರುವ ಏಷ್ಯ ಒಲಿಂಪಿಕ್‌ ಅರ್ಹತಾ ಕೂಟದ(Asia Olympic Qualifiers) 25ಮೀ. ಸ್ಪೋರ್ಟ್ಸ್ ಪಿಸ್ತೂಲ್‌ ವಿಭಾಗದಲ್ಲಿ ಭಾರತದ ರಿಥಂ ಸಂಗ್ವಾನ್(Rhythm Sangwan) ಕಂಚಿನ ಪದಕ ಗೆಲ್ಲುವ ಜತೆಗೆ ಪ್ಯಾರಿಸ್‌ ಒಲಿಂಪಿಕ್ಸ್(Paris Olympics 2024)​ ಕೂಟಕ್ಕೂ ಅರ್ಹತೆ ಪಡೆದರು. ಈ ಮೂಲಕ ಶೂಟಿಂಗ್‌ ಸ್ಪರ್ಧೆಯಲ್ಲಿ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ 16ನೇ ಕ್ರೀಡಾಪಟು ಎನಿಸಿಕೊಂಡರು.

ಈ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಕೊರಿಯದ ಯಾಂಗ್‌ ಜಿನ್‌ ಮತ್ತು ಕಿಮ್‌ ಯೆಜಿ ಅವರು ಒಲಿಂಪಿಕ್‌ ಸ್ಪರ್ಧೆಗೆ ಅನರ್ಹಗೊಂಡ ಕಾರಣದಿಂದ ಇದರ ಲಾಭ ರಿಥಂ ಅವರಿಗೆ ಲಭಿಸಿತು. ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಬೇಕಿದ್ದರೆ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲಬೇಕು.

ದಾಖಲೆ ಬರೆದ ಶೂಟಿಂಗ್​ ವಿಭಾಗ

ಸಂಗ್ವಾನ್ ಅವರು ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ಮೂಲಕ ಭಾರತದ ಶೂಟಿಂಗ್​ ವಿಭಾಗದಲ್ಲಿ ಹೊಸ ಮೈಲುಗಲ್ಲೊಂದು ನಿರ್ಮಾಣವಾಯಿತು. ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್​ಗೆ ಗರಿಷ್ಠ ಸಂಖ್ಯೆಯ ಶೂಟರ್​ಗಳನ್ನು ಕಳುಹಿಸಿಕೊಡಲಿದೆ. ಟೋಕಿಯೋದಲ್ಲಿ 2020ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ 15 ಸದಸ್ಯರ ಶೂಟಿಂಗ್‌ ತಂಡ ಕಳುಹಿಸಿರುವುದು ಇದುವರೆಗಿನ ದಾಖಲೆಯಾಗಿತ್ತು.

ಹರಿಯಾಣ ಮೂಲದ 20ರ ಹರೆಯದ ಸಂಗ್ವಾನ್​​ ಹ್ಯಾಂಗ್‌ಝೂ ಏಷ್ಯನ್‌ ಗೇಮ್ಸ್‌ನ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ತಂಡದ ಭಾಗವಾಗಿದ್ದರು. ಜಕಾರ್ತಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ರಿಥಂ ಅವರಿಗಿಂತ ಮೊದಲು ಭಾತತದ ಇಶಾ ಸಿಂಗ್‌ ಮತ್ತು ವರುಣ್‌ ತೋಮರ್‌ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಸದ್ಯ ಈ ಟೂರ್ನಿಯಲ್ಲಿ ಭಾರತಕ್ಕೆ ಇದುವರೆಗೆ ಮೂರು ಪದಕ ಲಭಿಸಿದೆ.

ಇದನ್ನೂ ಓದಿ ಒಲಿಂಪಿಕ್ಸ್‌ಗೂ ಕ್ರಿಕೆಟ್ ಎಂಟ್ರಿ; ಅಧಿಕೃತ ಪ್ರಕಟಣೆ ಹೊರಡಿಸಿದ ​ಒಲಿಂಪಿಕ್‌ ಸಮಿತಿ

ಮೀರಾಬಾಯಿ ಕಿಶೋರ್‌ ವಿದೇಶದಲ್ಲಿ ತರಬೇತಿಗೆ ಸಚಿವಾಲಯದ ಸಮ್ಮತಿ


ಪ್ಯಾರಿಸ್​ ಒಲಿಂಪಿಕ್ಸ್‌ಗೆ ಸಿದ್ಧತೆಯಾಗಿ ಜಾವೆಲಿನ್ ಎಸೆತಗಾರ ಕಿಶೋರ್ ಕುಮಾರ್ ಜೇನಾ ಮತ್ತು ಟೊಕಿಯೊ ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರ ವಿದೇಶಿ ತರಬೇತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸಮ್ಮತಿ ನೀಡಿದೆ.

ಕಿಶೋರ್ ಕುಮಾರ್ ಜೇನಾ ಆಸ್ಟ್ರೇಲಿಯಾದಲ್ಲಿ, ಮೀರಾಬಾಯಿ ಚಾನು ಅಮೆರಿಕದಲ್ಲಿ ಪುನಶ್ಚೇತನ-ತರಬೇತಿ ಪಡೆಯಲಿದ್ದಾರೆ. ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ಕಿಶೋರ್‌ 78 ದಿನಗಳ ಕಾಲ ತರಬೇತಿ ಪಡೆಯಲಿದ್ದು ಈ ವೆಚ್ಚವನ್ನು ಸಚಿವಾಲಯ ಭರಿಸಲಿದೆ. ಚಾನು ಅವರು ಅಮೆರಿಕದ ಸೇಂಟ್‌ ಲೂಯಿಯಲ್ಲಿ ಡಾ.ಆರನ್ ಹೊರ್ಷಿಗ್ ಅವರ ಮಾರ್ಗದರ್ಶನ ಪಡೆಯಲಿದ್ದಾರೆ.

‌’ಟಾಪ್ಸ್‌’ (ಟಾರ್ಗೆಟ್‌ ಒಲಿಂಪಿಕ್ ಪೋಡಿಯಂ ಸ್ಕೀಮ್‌) ಯೋಜನೆಯಡಿ ಜೇನಾ, ಅವರ ಕೋಚ್ ಮತ್ತು ಫಿಜಿಯೊಥೆರಪಿಸ್ಟ್ ಅವರ ವಿಮಾನಯಾನದ ವೆಚ್ಚ, ಊಟ, ವಸತಿಯ ವೆಚ್ಚ ಭರಿಸಲಿದೆ ಎಂದು ಕ್ರೀಡಾ ಸಚಿವಾಲಯ ತನ್ನ ಪ್ರಟಕಣೆ ತಿಳಿಸಿದೆ.

Exit mobile version