ಪರ್ತ್: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಅಸ್ವಸ್ಥಗೊಂಡಿದ್ದ ಆಸೀಸ್ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್(Ricky Ponting) ಅವರು ಚೇತರಿಸಿಕೊಂಡಿದ್ದು, ಶನಿವಾರ ಮತ್ತೆ ವೀಕ್ಷಕ ವಿವರಣೆಗೆ ಮರಳಿದ್ದಾರೆ.
ಶುಕ್ರವಾರ ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ಪಂದ್ಯದ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ವೇಳೆ ಪಾಂಟಿಂಗ್ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ನಡೆದ ಬಳಿಕ ಅವರ ಅಭಿಮಾನಿಗಳ ಜತೆಗೆ ಕ್ರಿಕೆಟ್ ಲೋಕದಲ್ಲಿ ಆತಂಕವೊಂದು ಸೃಷ್ಟಿಯಾಗಿತ್ತು. ಆದರೆ ಶನಿವಾರ ಅವರು ಮತ್ತೆ ಕಾಮೆಂಟ್ರಿ ಬಾಕ್ಸ್ಗೆ ಆಗಮಿಸುವ ಮೂಲಕ ಎಲ್ಲರ ಆತಂಕವನ್ನು ದೂರ ಮಾಡಿದ್ದಾರೆ.
ಶನಿವಾರ ವೀಕ್ಷಕ ವಿವರಣೆಗೆ ಆಗಮಿಸಿ ಮಾತನಾಡಿರುವ ಪಾಂಟಿಂಗ್, “ಸದ್ಯ ನಾನು ಆರೋಗ್ಯವಾಗಿದ್ದೇನೆ. ಹೊಸ ಉರುಪು ಮತ್ತು ಉತ್ಸಾಹದಿಂದ ಇದ್ದೇನೆ. ಬಹುಶಃ ನಿನ್ನೆ ಬಹಳಷ್ಟು ಜನರನ್ನು ನಾನು ಆತಂಕಗೊಳ್ಳುವಂತೆ ಮಾಡಿದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೂ ಭಯವಾಗಿತ್ತು” ಎಂದು ಹೇಳುವ ಮೂಲಕ ತಮ್ಮ ಆರೋಗ್ಯದ ಸುಧಾರಣೆಯನ್ನು ಪ್ರಕಟಿಸಿದರು.
ಶುಕ್ರವಾರ ನಡೆದಿದ್ದೇನು
“ಕಾಮೆಂಟ್ರಿ ನಡೆಸುತ್ತಿದ್ದ ವೇಳೆ ಎದೆ ಭಾಗದಲ್ಲಿ ಅಲ್ಪ ಪ್ರಮಾಣದ ನೋವು ಕಾಣಿಸಿಕೊಂಡಿತು. ಅದನ್ನು ನಿಯಂತ್ರಿಸಿಕೊಳ್ಳಲು ನೋಡಿದೆ. ವೀಕ್ಷಕ ವಿವರಣೆ ಸ್ಥಳದಿಂದ ಹೊರಬಂದು ಸ್ಪಲ್ಪ ನಡೆದಾಡಿದೆ. ಆದರೆ ಸ್ವಲ್ಪ ಹೊತ್ತಿನಲ್ಲೇ ತಲೆತಿರುಗಿದಂತಾಗಿ ಪಕ್ಕದಲ್ಲಿದ್ದ ಕುರ್ಚಿಯನ್ನು ಹಿಡಿದುಕೊಂಡೆ ಆದರೂ ನೋವು ಕಡಿಮೆಯಾಗುವ ಲಕ್ಷಣ ಕಾಣಲಿಲ್ಲ ಬಳಿಕ ಅಲ್ಲೇ ವೀಕ್ಷಕ ವಿವರಣೆಯಲ್ಲಿ ತೊಡಗಿದ್ದ ಜಸ್ಟಿನ್ ಲ್ಯಾಂಗರ್ ಅವರಿಗೆ ವಿಷಯ ತಿಳಿಸಿದೆ. ಅವರು ಆಸ್ಪತ್ರೆಗೆ ದಾಖಲಿಸಿದರು” ಎಂದು ಪಾಂಟಿಂಗ್ ಶುಕ್ರವಾರ ನಡೆದ ಘಟನೆ ಬಗ್ಗೆ ವಿವರಿಸಿದರು.
ಇದನ್ನೂ ಓದಿ | Ricky Ponting | ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ಗೆ ಹೃದಯ ಬೇನೆ, ಅಸ್ಪತ್ರೆಗೆ ದಾಖಲು