ಅಹಮದಾಬಾದ್: ಕೋಲ್ಕೊತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ರಿಂಕು ಸಿಂಗ್ ಐಪಿಎಲ್ (IPL 2022) ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರೀಗ ತಂಡವೊಂದರ ಗೆಲುವಿಗಾಗಿ ಕೊನೇ ಓವರ್ನಲ್ಲಿ ಸತತವಾಗಿ ಐದು ಸಿಕ್ಸರ್ ಬಾರಿಸಿದ ಬ್ಯಾಟರ್. ಐಪಿಎಲ್ 16ನೇ ಆವೃತ್ತಿಯ ಭಾನುವಾರದ ಡಬಲ್ ಹೆಡರ್ನ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಪಂದ್ಯದ ಕೊನೇ ಓವರ್ನಲ್ಲಿ ಕೆಕೆಆರ್ ಗೆಲುವಿಗೆ 29 ರನ್ಗಳು ಬೇಕಾಗಿದ್ದವು. ಯಶ್ ದಯಾಳ್ ಎಸೆದ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದ ಕೋಲ್ಕೊತಾ ಗೆಲುವಿಗೆ ಉಳಿದ ಐದು ಎಸೆತಗಳಲ್ಲಿ 28 ರನ್ ಬೇಕಾಗಿತ್ತು. ಸ್ಟ್ರೈಕ್ನಲ್ಲಿದ್ದ ರಿಂಕು ಸಿಂಗ್ ಮುಂದಿನ ಐದು ಎಸೆತಗಳಲ್ಲಿ ಸತತವಾಗಿ ಐದು ಸಿಕ್ಸರ್ ಸಿಡಿಸಿದರು. ಬೌಲರ್ ಯಶ್ ದಯಾಳ್ ಕುಸಿತು ಕುಳಿತರು.
ಅದೇ ರೀತಿ ರಿಂಕು ಸಿಂಗ್ ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ್ದರು. ಆದರೆ ಕೊನೇ ಏಳು ಎಸೆತದಲ್ಲಿ 40 ರನ್ ಬಾರಿಸಿದರು. ಅದರಲ್ಲಿ ಆರು ಸಿಕ್ಸರ್ ಹಾಗೂ ಫೋರ್ ಸೇರಿಕೊಂಡಿವೆ. (6, 4, 6, 6, 6, 6, 6) ಈ ಮೂಲಕ ಅವರು ವಿರೋಚಿತ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿದರು.
ಗುಜರಾತ್ ಮತ್ತು ಕೆಕೆಅರ್ ತಂಡಗಳ ನಡುವಿನ ಪಂದ್ಯದ ವಿವರ ಇಲ್ಲಿದೆ
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಭಾನುವಾರದ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ಬಾರಿಸಿತು. ಗುರಿ ಬೆನ್ನಟ್ಟಿದ ಕೆಕೆಆರ್ ಬಳಗ ಕೊನೇ ಎಸೆತದಲ್ಲಿ ಸಿಕ್ಸರ್ ಬಾರಿಸುವುದರೊಂದಿಗೆ 7 ವಿಕೆಟ್ ನಷ್ಟಕ್ಕೆ 207 ರನ್ ಬಾರಿಸಿ ಜಯಶಾಲಿಯಾಯಿತು. ಈ ಮೂಲಕ ಗುಜರಾತ್ ತಂಡದ ವಿಜಯ್ ಶಂಕರ್ 24 ಎಸೆತಗಳಲ್ಲಿ ಬಾರಿಸಿದ್ದ ಅಜೇಯ 63 ರನ್ಗಳ ಸಾಧನೆ ಹಾಗೂ ರಶೀದ್ ಖಾನ್ ಅವರ ಹ್ಯಾಟ್ರಿಕ್ ಸಾಧನೆ ಮಂಕಾಯಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ರಹ್ಮನುಲ್ಲಾ ಗುರ್ಬಜ್ (15 ರನ್), ಎನ್ ಜಗದೀಶನ್ (7 ರನ್) ಬೇಗ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಆಡಲು ಅವಕಾಶ ಪಡೆದ ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 8 ಫೋರ್ಗಳ ಸಮೇತ 83 ರನ್ ಬಾರಿಸಿದರು. ಜತೆಯಾದ ನಾಯಕ ನಿತೀಶ್ ರಾಣಾ 29 ಎಸೆತಗಳಲ್ಲಿ 45 ರನ್ ಬಾರಿಸಿದರು. ಈ ಜೋಡಿ ಮೂರನೇ ವಿಕೆಟ್ಗೆ 100 ರನ್ ಬಾರಿಸಿ ಗೆಲುವಿನ ವಿಶ್ವಾಸ ಮೂಡಿಸಿತು. ಈ ಇಬ್ಬರ ವಿಕೆಟ್ಗಳನ್ನು ವೇಗದ ಬೌಲರ್ ಅಲ್ಜಾರಿ ಜೋಸೆಫ್ ಕಿತ್ತರು. ಇದಾದ ಬಳಿಕ ಕೈ ಚಳಕ ತೋರಿದ ಹಂಗಾಮಿ ನಾಯಕ ರಶೀದ್ ಖಾನ್ ಆ್ಯಂಡ್ರೆ ರಸೆಲ್ (1), ಸುನೀಲ್ ನರೈನ್ (0) ಹಾಗೂ ಹಿಂದಿನ ಪಂದ್ಯದ ಹೀರೋ ಶಾರ್ದೂಲ್ ಠಾಕೂರ್ (0) ವಿಕೆಟ್ ಕಿತ್ತು ಹ್ಯಾಟ್ರಿಕ್ ಸಾಧನೆ ಮಾಡುವ ಜತೆಗೆ ಕೆಕೆಆರ್ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಿದರು.
16.3 ಓವರ್ಗಳಲ್ಲಿ 155 ರನ್ ಬಾರಿಸಿ ಏಳು ವಿಕೆಟ್ ಕಳೆದುಕೊಂಡು ಕೆಕೆಆರ್ ತಂಡ ಸೋಲುವುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಆ ಬಳಿಕ ನಡೆದ್ದು ಬ್ಯಾಟಿಂಗ್ ಅಬ್ಬರ. ಉಮೇಶ್ ಯಾದವ್ 6 ಎಸೆತಗಳಲ್ಲಿ 5 ರನ್ ಗಳಿಸಿದರೆ ಅಲ್ಲಿಯವರೆಗೆ ನಿಧಾನಗತಿಯಲ್ಲಿ ಆಡುತ್ತಿದ್ದ ರಿಂಕು ಸಿಂಗ್ ಏಕಾಏಕಿ ಸ್ಫೋಟಿಸಿದರು. ಆರು ಸಿಕ್ಸರ್ ಹಾಗೂ ಒಂದು ಫೋರ್ ಸಮೇತ ಅಜೇಯ 48 ರನ್ ಬಾರಿಸಿ ಜಯ ತಂದುಕೊಟ್ಟರು.
ವಿಜಯ್ ಶಂಕರ್ ಸ್ಫೋಟಕ ಬ್ಯಾಟಿಂಗ್
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಸಾಯಿ ಸುದರ್ಶನ್(53) ಮತ್ತು ವಿಜಯ್ ಶಂಕರ್ (ಅಜೇಯ 63) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 204 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಗುಜರಾತ್ ಪರ ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹ ನಿಧಾನಗತಿಯ ಆಟವಾಡಿದರು. ಕಳೆದ ಪಂದ್ಯಗಳಲ್ಲಿ ತೋರಿದ ಬ್ಯಾಟಿಂಗ್ ಅಬ್ಬರ ಈ ಪಂದ್ಯದಲ್ಲಿ ಕಂಡು ಬರಲಿಲ್ಲ. ಎಸೆತವೊಂದಕ್ಕೆ ರನ್ ಗಳಿಸುತ್ತಾ ಸಾಗಿದರು. ಸಾಹ 17 ಎಸೆತಗಳಿಂದ 17 ರನ್ ಗಳಿಸಿ ಸುನಿಲ್ ನಾರಾಯಣ್ಗೆ ವಿಕೆಟ್ ಒಪ್ಪಿಸಿದರು. ಗಿಲ್ 31 ಎಸೆತಗಳಿಂದ 5 ಬೌಂಡರಿ ಬಾರಿಸಿ 39 ರನ್ಗೆ ಆಟ ಮುಗಿಸಿದರು. ಈ ವಿಕೆಟ್ ಕೂಡ ನಾರಾಯಣ್ ಪಾಲಾಯಿತು. ಸಾಹಾ ಮತ್ತು ಗಿಲ್ ಮೊದಲ ವಿಕೆಟ್ಗೆ 33 ರನ್ ಜತೆಯಾಟ ನಡೆಸಿತು.
ಈ ವಿಕೆಟ್ ಪತನದ ಬಳಿಕ ಆಡಲಿಳಿದ ಸಾಯಿ ಸುದರ್ಶನ್ ಅವರು ಕೆಕೆಆರ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು. ಇದೇ ವೇಳೆ ಅವರು ಅರ್ಧಶತಕವನ್ನೂ ಪೂರ್ತಿಗೊಳಿಸಿದರು. ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಅವರು ಆ ಬಳಿಕ ಸಿಡಿಯಲಾರಂಭಿಸಿದರು. ಅಭಿನವ್ ಮನೋಹರ್ ಅವರು ಸತತ ಬೌಂಡರಿ ಬಾರಿಸಿ ಅಪಾಯಾಕಾರಿಯಾಗುವ ಸೂಚನೆ ನೀಡಿದರೂ ಅವರ ಓಟ ಮೂರೇ ಬೌಂಡರಿಗೆ ಕೊನೆಗೊಂಡಿತು. 8 ಎಸೆತದಲ್ಲಿ 12 ರನ್ಗಳ ಕೊಡುಗೆ ನೀಡಿದರು. 38 ಎಸೆತ ಎದುರಿಸಿದ ಸಾಯಿ ಸುದರ್ಶನ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು.
ಅಂತಿಮ ಹಂತದಲ್ಲಿ ವಿಜಯ್ ಶಂಕರ್ ಸಿಡಿದು ನಿಂತ ಪರಿಣಾಮ ತಂಡ ಬೃಹತ್ ಮೊತ್ತ ದಾಖಲಿಸಿತು. ಶಾರ್ದೂಲ್ ಠಾಕೂರ್ ಅವರ ಅಂತಿಮ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಮಿಂಚಿದರು. ಕೊನೆಯ 14 ಎಸೆತದಲ್ಲಿ ಗುಜರಾತ್ಗೆ 50 ರನ್ ಹರಿದು ಬಂತು. ಕೇವಲ 21 ಎಸೆತಗಳಲ್ಲಿ ವಿಜಯ್ ಶಂಕರ್ ಅರ್ಧಶತಕ ಬಾರಿಸಿದರು. ಒಟ್ಟು 24 ಎಸೆತ ಎದುರಿಸಿದ ಅವರು ಬರೋಬ್ಬರಿ 5 ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿ ಅಜೇಯ 63 ರನ್ ಬಾರಿಸಿದರು.
2 ಸಾವಿರ್ ರನ್ ಪೂರೈಸಿದ ಶುಭಮನ್ ಗಿಲ್
ಈ ಪಂದ್ಯದಲ್ಲಿ ಶುಭಮನ್ ಗಿಲ್ ಅವರು 23ರನ್ ಗಳಿಸಿದ ವೇಳೆ ಐಪಿಎಲ್ನಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಟೀಮ್ ಇಂಡಿಯಾದ ಎರಡನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಪಂತ್ ಅವರು 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್ ಅವರು 23 ವರ್ಷ 214 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಅತಿ ಕಡಿಮೆ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ಏಳನೇ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಗಿಲ್ ಈ ಮೇಲುಗಲ್ಲು ತಲುಪಲು 74 ಇನಿಂಗ್ಸ್ ತೆಗೆದುಕೊಂಡರು. ಕೆ.ಎಲ್. ರಾಹುಲ್ ಅವರು 60 ಇನಿಂಗ್ಸ್ನಲ್ಲಿ 2 ಸಾವಿರ ರನ್ ಪೂರೈಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್ 63 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ.