ಮುಂಬಯಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್(Rishabh Pant) ಚೇತರಿಕೆಗೆ ಸುಮಾರು 9 ತಿಂಗಳು ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಪಂತ್ ಈ ವರ್ಷ ನಡೆಯುವ ಎಲ್ಲ ಕ್ರಿಕೆಟ್ ಸರಣಿಯಿಂದ ದೂರ ಉಳಿಯುವುದು ಬಹುತೇಕ ಖಚಿತಗೊಂಡಂತಿದೆ.
ಸದ್ಯ ಪಂತ್ ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, 16ನೇ ಆವೃತ್ತಿಯ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಐಪಿಎಲ್ 2023ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಂತ್ ಅವರನ್ನು 16 ಕೋ.ರೂ.ಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಇದೀಗ ಪಂತ್ ಅವರು ಐಪಿಎಲ್‌ನಲ್ಲಿ ಆಡದಿದ್ದಲ್ಲಿ ಅವರಿಗೆ ಹಣ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಹಣವನ್ನು ಫ್ರಾಂಚೈಸಿ ಬದಲು ಬಿಸಿಸಿಐ ನೀಡುತ್ತದೆ ಎಂದು ಮಾಧ್ಯಮ ವರದಿಯಿಂದ ತಿಳಿದುಬಂದಿದೆ.
ಪಂತ್ ಈ ವರ್ಷ ಐಪಿಎಲ್‌ನಲ್ಲಿ ಆಡದಿದ್ದರೂ, ಬಿಸಿಸಿಐ ಅವರ ಐಪಿಎಲ್ ಸಂಬಳದ 16 ಕೋಟಿ ರೂ.ಗಳನ್ನು ದಿಲ್ಲಿ ಕ್ಯಾಪಿಟಲ್ಸ್ ಪರವಾಗಿ ಸಂಪೂರ್ಣವಾಗಿ ಪಾವತಿಸುತ್ತದೆ. ಇದು ಮಾತ್ರವಲ್ಲದೆ, ಕೇಂದ್ರ ಒಪ್ಪಂದದಡಿಯಲ್ಲಿ ಅವರು ಪಡೆದ ವಾರ್ಷಿಕ ರಿಟೈನರ್‌ಶಿಪ್ ಶುಲ್ಕಕ್ಕೆ 5 ಕೋಟಿ ರೂ.ಗಳನ್ನು ನೀಡುತ್ತದೆ ಎಂದು ವರದಿಯಾಗಿದೆ.
ಬಿಸಿಸಿಐ ಏಕೆ ಸಂಬಳ ನೀಡುತ್ತದೆ!
ಬಿಸಿಸಿಐ, ಟೀಮ್ ಇಂಡಿಯಾದ ಎಲ್ಲ ಕೇಂದ್ರೀಯ ಗುತ್ತಿಗೆ ಆಟಗಾರರಿಗೆ ವಿಮೆ ಮಾಡಲಾಗುತ್ತದೆ. ಬಿಸಿಸಿಐ ನಿಯಮಗಳ ಪ್ರಕಾರ, ಈ ಆಟಗಾರರು ಗಾಯದ ಕಾರಣ ಐಪಿಎಲ್‌ನಿಂದ ಹೊರಗುಳಿದಿದ್ದಲ್ಲಿ ಮಂಡಳಿಯಿಂದ ಪೂರ್ಣವಾಗಿ ಅವರಿಗೆ ಮೊತ್ತವನ್ನು ಪಾವತಿಸಲಾಗುತ್ತದೆ. ಈ ಮೊತ್ತವನ್ನು ವಿಮಾ ಕಂಪನಿ ಪಾವತಿಸುತ್ತದೆ. ಆದ್ದರಿಂದ ಫ್ರಾಂಚೈಸಿ ಬದಲು ಆಟಗಾರರಿಗೆ ಬಿಸಿಸಿಐ ಹಣ ಪಾವತಿಸುತ್ತದೆ.
ರಿಷಭ್ ಪಂತ್ ಅವರನ್ನು ಬಿಸಿಸಿಐ 2021-22ರ ಸೀಸನ್‌ಗಾಗಿ ಕೇಂದ್ರ ಗುತ್ತಿಗೆ ಪಟ್ಟಿಯ ಗ್ರೇಡ್ “ಎ” ಯಲ್ಲಿ ಇರಿಸಿದೆ. ಇದರಲ್ಲಿ ಭಾಗಿಯಾಗಿರುವ ಆಟಗಾರರು ವಾರ್ಷಿಕ ರಿಟೈನರ್ ಶಿಪ್ ಶುಲ್ಕವಾಗಿ 5 ಕೋಟಿ ರೂ. ಪಡೆಯಲಿದ್ದಾರೆ. ಈ ಹಿಂದೆ ಐಪಿಎಲ್ 2022 ರ ಮೊದಲು ದೀಪಕ್ ಚಹಾರ್ ಕೂಡ ಗಾಯಗೊಂಡಿದ್ದರು. ಅವರನ್ನು 14 ಕೋಟಿಗೆ ಚೆನ್ನೈ ಸೂಪರ್‌ಕಿಂಗ್ಸ್ ಖರೀದಿಸಿತ್ತು. ಆದರೆ ಅವರು ಈ ಟೂರ್ನಿಯಲ್ಲಿ ಆಡಿರಲಿಲ್ಲ. ಈ ವೇಳೆ ಬಿಸಿಸಿಐ ನಿಯಮಗಳ ಪ್ರಕಾರ ಅವರಿಗೆ ಪೂರ್ಣ ಹಣವನ್ನು ಪಾವತಿಸಲಾಗಿತ್ತು ಎಂದು ತಿಳಿದು ಬಂದಿದೆ. ಇದೀಗ ಪಂತ್ಗೂ ಪೂರ್ಣ ಮೊತ್ತ ಸಿಗಲಿದೆ ಎಂದು ಮಾಧ್ಯಮ ವರದಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿ; ಬಿಸಿಸಿಐ ಮಾಹಿತಿ