ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ರಿಷಭ್ ಪಂತ್(Rishabh Pant) ಅವರಿಗಿ ಹೆಚ್ಚಿನ ಚಿಕಿತ್ಸೆ ಅಗತ್ಯಬಿದ್ದರೆ ದೆಹಲಿಗೆ ಸ್ಥಳಾಂತರಿಸಲಾಗುವುದು ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ಶನಿವಾರ ಹೇಳಿದ್ದಾರೆ.
“ಪಂತ್ ಸದ್ಯ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೊಮ್ಮೆ ವೈದ್ಯರು ಸಲಹೆ ನೀಡಿದರೆ, ಪ್ಲಾಸ್ಟಿಕ್ ಸರ್ಜರಿ ನಡೆಸುವ ಸಲುವಾಗಿ ಪಂತ್ ಅವರನ್ನು ದೆಹಲಿಗೆ ಏರ್‌ಲಿಫ್ಟ್ ಮಾಡಲಾಗುವುದು. ಈ ಕುರಿತು ನಾವು ಮ್ಯಾಕ್ಸ್ ಆಸ್ಪತ್ರೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ” ಎಂದು ರೋಹನ್ ತಿಳಿಸಿದ್ದಾರೆ.
ಶನಿವಾರ ಪಂತ್ ಅವರ ಎಂಆರ್‌ಐ ಸ್ಕ್ಯಾನ್ ವರದಿ ಪ್ರಕಟಗೊಂಡಿದೆ. ಇದರಲ್ಲಿ ಪಂತ್ ಅವರ ತಲೆ ಮತ್ತು ಬೆನ್ನು ಮೂಳೆಗೆ ಯಾವುದೇ ಏಟಾಗಿಲ್ಲ ಎಂಬುದು ತಿಳಿದು ಬಂದಿದೆ. ಆದರೆ ಬಲಗಾಲಿನ ಮಂಡಿಯ ಲಿಗಮೆಂಟ್ (ಅಸ್ಥಿರಜ್ಜು) ಹರಿದಿರುವುದು ಪರೀಕ್ಷೆಯಲ್ಲಿ ಗೊತ್ತಾಗಿದೆ. ಇದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಈ ಮಧ್ಯೆ ಬೆಂಕಿಯಿಂದಾಗಿ ಮುಖಕ್ಕೆ ಮತ್ತು ದೇಹಕ್ಕೆ ಆಗಿರುವ ಗಾಯದ ಗುರುತು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಅಗತ್ಯಬಿದ್ದರೆ ಅವರನ್ನು ದೆಹಲಿಗೆ ಕರೆತರಲಾಗುವುದು ಎಂದು ಡಿಡಿಸಿಎ ತಿಳಿಸಿದೆ.
ವಿದೇಶದಲ್ಲಿ ಚಿಕಿತ್ಸೆ ನೀಡಲು ಬಿಸಿಸಿಐ ಚಿಂತನೆ
ರಿಷಭ್ ಪಂತ್ ಲಿಗಮೆಂಟ್ ಗಾಯದ ಚಿಕಿತ್ಸೆಯು ತನ್ನ ವೈದ್ಯಕೀಯ ತಂಡದ ಉಪಸ್ಥಿತಿಯಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ಈಗಾಗಲೇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಗತ್ಯಬಿದ್ದರೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಬಿಸಿಸಿಐ, ಪಂತ್‌ರ ತಾಯಿಗೆ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶುಕ್ರವಾರ ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪಂತ್ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು. ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಆವರಿಸುವ ಮುನ್ನವೇ ಹೊರಬಂದ ಕಾರಣ ಪಂತ್ ಬದುಕುಳಿದಿದ್ದರು.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಎಂಆರ್‌ಐ ಸ್ಕ್ಯಾನ್ ವರದಿ ಪ್ರಕಟ; ಔಟ್ ಆಫ್ ಡೇಂಜರ್ ಎಂದ ವೈದ್ಯರು!