ನವದೆಹಲಿ: ಕಾರು ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಚೇತರಿಕೆಗೆ ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಸೇರಿದಂತೆ ಹಲವಾರು ಕ್ರಿಕೆಟಿಗರು ಹಾರೈಸಿದ್ದಾರೆ.
ಯುಎಇಯಿಂದ ಮರಳಿದ ಪಂತ್ ಶುಕ್ರವಾರ ದಿಲ್ಲಿಯಿಂದ ಉತ್ತರಾಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ರೂರ್ಕಿ ಬಳಿ ಅವರ ಕಾರು ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಪಂತ್ ಅವರ ತಲೆ, ಮೊಣಕಾಲಿಗೆ ಗಾಯಗಳಾಗಿವೆ. ಸದ್ಯ ಅವರು ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಪಂತ್ ಅವರ ಆರೋಗ್ಯ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟೀಮ್ ಇಂಡಿಯಾದ ಸಹ ಆಟಗಾರರು ಸೇರಿದಂತೆ ಹಲವು ಮಾಜಿ ಆಟಗಾರರು ಹಾರೈಸಿದ್ದಾರೆ.
“ರಿಷಭ್ ಪಂತ್, ಶೀಘ್ರ ಗುಣಮುಖರಾಗಿ. ನಿಮ್ಮ ಚೇತರಿಕೆಗೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡುವ ಮೂಲಕ ಹಾರೈಸಿದ್ದಾರೆ.
“ಪ್ರಿಯ ರಿಷಭ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಬಹುಬೇಗನೆ ಆರೋಗ್ಯವಂತನಾಗು” ಎಂದು ಭಾರತದ ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
“ರಿಷಬ್ ಪಂತ್ ಗಾಗಿ ಪ್ರಾರ್ಥನೆ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು ಬಹಳ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಚಾಂಪ್ ಬೇಗ ಗುಣಮುಖರಾಗಿ” ಎಂದು ಭಾರತದ ಮಾಜಿ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
“ರಿಷಬ್ ಪಂತ್ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಅವರು ಮತ್ತೆ ಮುಂದಿನಂತೆ ಕ್ರಿಕೆಟ್ ಮೈದಾನಕ್ಕೆ ಮರಳಲಿ ಎಂದು ಹಿರಿಯ ಕ್ರಿಕೆಟ್ ವಿಶ್ಲೇಷಕ ಮತ್ತು ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಹಾರೈಸಿದ್ದಾರೆ.
ಇದನ್ನೂ ಓದಿ | Rishabh Pant | ಬೆಳಗಾಗುವ ಮೊದಲು ಮನೆ ತಲುಪಿ ಅಮ್ಮನಿಗೆ ಸರ್ಪ್ರೈಸ್ ಕೊಡಲು ಹೊರಟಿದ್ದರು ರಿಷಭ್