ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಸೋಮವಾರ(ಫೆ.27) ಸೌರವ್ ಗಂಗೂಲಿ ಅವರು ಪಂತ್ ಕ್ರಿಕೆಟ್‌ಗೆ ಮರಳಲು ಕನಿಷ್ಠ 2 ವರ್ಷಗಳ ಕಾಲ ಸಮಯ ಬೇಕಾಗಬಹುದು ಎಂದು ಹೇಳಿದ್ದರು. ಆದರೆ ಇದೀಗ ಪಂತ್ ತಮ್ಮ ಚೇತರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ನಾನು ಈಗ ಉತ್ತಮವಾಗಿದ್ದೇನೆ, ಆರೋಗ್ಯದಲ್ಲಿ ಕೂಡ ಉತ್ತಮ ಸುಧಾರಣೆಯಾಗುತ್ತಿದೆ” ಎಂದು ಹೇಳಿದ್ದಾರೆ.
“ನನ್ನ ಚೇತರಿಕೆಗೆ ಈಗಲೂ ಸಾಕಷ್ಟು ಜನ ಶುಭ ಹಾರೈಸುತ್ತಿದ್ದಾರೆ. ಚೇತರಿಕೆಯ ಹಾದಿಯಲ್ಲಿ ಬರುವ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ. ದೇವರ ದಯೆ ಮತ್ತು ವೈದ್ಯಕೀಯ ತಂಡದ ಕಾಳಜಿಯಿಂದ ನಾನು ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸ ಹೊಂದಿದ್ದೇನೆ” ಎಂದು ಪಂತ್ ಹೇಳಿದರು.
“ನನ್ನ ಚೇತರಿಕೆಯ ಅವಧಿಯಲ್ಲಿ ನಾನು ಜೀವನವನ್ನು ಪೂರ್ಣವಾಗಿ ಆನಂದಿಸುತ್ತಿದ್ದೇನೆ, ದೈನಂದಿನ ದಿನಚರಿಯಲ್ಲಿ ನಾವು ನಿರ್ಲಕ್ಷಿಸುವ ಚಿಕ್ಕ ಚಿಕ್ಕ ವಿಷಯಗಳನ್ನು ಈಗ ಗಮನಿಸುತ್ತಿದ್ದೇನೆ. ಪ್ರತಿದಿನ ನಮಗೆ ಸಂತೋಷವನ್ನು ನೀಡುವ ಸಣ್ಣ ವಿಷಯಗಳನ್ನು ಆನಂದಿಸಲು ನಾವು ಮರೆತಿದ್ದೇವೆ. ಆದರೆ ಈ ಎಲ್ಲ ವಿಚಾರಗಳನ್ನು ಈಗ ನಾನು ಆನಂದಿಸುತ್ತಿದ್ದೇನೆ” ಎಂದು ಪಂತ್ ಹೇಳಿದ್ದಾರೆ.
ದಿನದಲ್ಲಿ ಮೂರು ಬಾರಿ ಫಿಸಿಯೋಥೆರಪಿ
ವೇಳಾಪಟ್ಟಿಯ ಪ್ರಕಾರ ನಾನು ನನ್ನ ದಿನಚರಿಯನ್ನು ಅನುಸರಿಸುತ್ತಿದ್ದೇನೆ. ಬೆಳಗ್ಗೆ ಮೊದಲ ಹಂತದ ಫಿಸಿಯೋಥೆರಪಿಗೆ ಒಳಗಾಗುತ್ತೇನೆ. ಇದು ಮುಗಿದ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಇದಾಗ ಬಳಿಕ ಮತ್ತೆ ಫಿಸಿಯೋಥೆರಪಿ ಸೆಷನ್‌ಗೆ ಒಳಗಾಗುತ್ತೇನೆ. ಒಟ್ಟಾರೆ ಮೂರು ಬಾರಿ ಫಿಸಿಯೋಥೆರಪಿ ಮಾಡುತ್ತೇನೆ ಎಂದು ಹೇಳಿದರು.
ಎಷ್ಟು ನೋವನ್ನು ಸಹಿಸಿಕೊಳ್ಳಬಲ್ಲೆ ಎನ್ನುವುದ ಪ್ರಕಾರ ತರಬೇತಿ ಪಡೆಯುತ್ತಿದ್ದೇನೆ. ಪ್ರತಿದಿನ ಕಠಿಣವಾದ ಡಯಟ್ ಪಾಲಿಸುತ್ತೇನೆ. ಹಣ್ಣುಗಳು ಮತ್ತು ಜ್ಯೂಸ್‌ಗಳನ್ನು ಹೆಚ್ಚಾಗಿ ಸೇವಿಸುತ್ತೇನೆ. ಸರಿಯಾಗಿ ನಡೆಯಲು ಸಾಧ್ಯವಾಗುವವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದು ಪಂತ್ ಹೇಳಿದ್ದಾರೆ.