ಮುಂಬಯಿ: ಐಸಿಸಿ ಟಿ20 ವಿಶ್ವ ಕಪ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಸತತವಾಗಿ ಎಡವುತ್ತಿರುವ ದಿನೇಶ್ ಕಾರ್ತಿಕ್(Dinesh Karthik) ಆಟದ ಬಗ್ಗೆ ಟೀಮ್ ಇಂಡಿಯಾ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅದರಂತೆ ದಯವಿಟ್ಟು ಕ್ರಿಕೆಟ್ಗೆ ವಿದಾಯ ಹೇಳಿ ಮತ್ತೆ ಕಾಮೆಂಟ್ರಿ ಬಾಕ್ಸ್ಗೆ ತೆರಳಿ ಎಂದು ಕಾರ್ತಿಕ್‌ಗೆ ಸಲಹೆ ನೀಡಿದ್ದಾರೆ.
ಅಭಿಮಾನಿಗಳು ಹೀಗೆ ಹೇಳಲೂ ಒಂದು ಕಾರಣವಿದೆ. ದಿನೇಶ್ ಕಾರ್ತಿಕ್ ಇತ್ತೀಚೆಗೆ ತಂಡ ಸೇರುವ ಮುನ್ನ ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದರು. ಆದರೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಅವರನ್ನು ಭಾರತ ತಂಡಕ್ಕೆ ಸೇರಿಸಲಾಯಿತು. ಅವರ ಆಗಮನದಿಂದ ಯುವ ಆಟಗಾರ ರಿಷಭ್ ಪಂತ್ (Rishabh Pant) ತಂಡದಿಂದ ಹೊರಗುಳಿಯುವಂತಾಯಿತು. ಇದೀಗ ಅವರು ಟಿ20 ವಿಶ್ವ ಕಪ್ನಲ್ಲಿ ಸತತ ವೈಫಲ್ಯ ತೋರುತ್ತಿರುವ ಬಗ್ಗೆ ಬೇಸರಗೊಂಡ ಅಭಿಮಾನಿಗಳು ಕಾರ್ತಿಕ್ ಬದಲು ಪಂತ್ಗೆ ಅವಕಾಶ ನೀಡುವಂತೆ ಟೀಮ್ ಮ್ಯಾನೇಜ್‌ಮೆಂಟ್‌ಗೆ ಆಗ್ರಹಿಸಿದ್ದು ಜತೆಗೆ ಕಾರ್ತಿಕ್ ಅವರನ್ನು ಕಾಮೆಂಟ್ರಿ ಬಾಕ್ಸ್ಗೆ ತೆರಳುವಂತ್ತೆ ಒತ್ತಾಯಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗ್ರೇಟ್ ಫಿನಿಷರ್ ಪಾತ್ರ ವಹಿಸಿ ಮಿಂಚಿದ್ದ ದಿನೇಶ್ ಕಾರ್ತಿಕ್ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಅದರಂತೆ ದಕ್ಷಿಣ ಆಫ್ರಿಕಾ ವಿರದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಟಿ20 ವಿಶ್ವ ಕಪ್ಗೆ ಆಯ್ಕೆಯಾದರು. ಆದರೆ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ (1 ), ದಕ್ಷಿಣ ಆಫ್ರಿಕಾ( 6) ಹಾಗೂ ಬಾಂಗ್ಲಾದೇಶ (7) ವಿರುದ್ಧದ ಪಂದ್ಯಗಳಲ್ಲಿ ಎರಡಂಕಿ ವೈಯಕ್ತಿಕ ಮೊತ್ತ ದಾಟಲು ಎಡವಿದ್ದಾರೆ. ಆ ಮೂಲಕ ರಿಷಭ್ ಪಂತ್ ಸ್ಥಾನದಲ್ಲಿ ಅವಕಾಶ ನೀಡಿದ ಟೀಮ್ ಮ್ಯಾನೇಜ್‌ಮೆಂಟ್‌ಗೆ ನಿರಾಶೆ ಮೂಡಿಸಿದ್ದಾರೆ. ಆದರೂ ಅವರಿಗೆ ತಂಡ ಮತ್ತೆ ಮಣೆ ಹಾಕುತ್ತಿರುವುದು ಬೇಸರ ತಂದಿದೆ. ಮುಂದಿನ ಪಂದ್ಯದಲ್ಲಾದರೂ ದಿನೇಶ್ ಕಾರ್ತಿಕ್ ಬದಲು ಪಂತ್ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ನೆಟ್ಟಿಗರು, “ಪಂದ್ಯವನ್ನು ಗೆಲ್ಲಿಸಬೇಕೆಂದು ಆಡುವ ಆಟಗಾರ ರಿಷಭ್‌ಪಂತ್ ಬದಲು ಬೇಕಾಬಿಟ್ಟಿ ಆಡುವ ಬ್ಯಾಟರ್ ದಿನೇಶ್ಕಾರ್ತಿಕ್ಗೆ ಅವಕಾಶ ಕಲ್ಪಿಸುವುದರಿಂದ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ”. “ದಿನೇಶ್ ಕಾರ್ತಿಕ್‌ಗೆ ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಆಡಿದ ಅನುಭವವಿಲ್ಲ. ಆದರೆ ಈ ಪಿಚ್‌ಗಳಲ್ಲಿ ಆಡಿದ ಅಪಾರ ಅನುಭವ ಇರುವ ರಿಷಭ್ ಪಂತ್‌ರನ್ನು ಆಡುವ 11ರ ಬಳಗದಿಂದ ದೂರ ಇಟ್ಟಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ” ಎಂದು ನೆಟ್ಟಿಗರು ಟ್ವಿಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Raghu Raghavendra| ಆಟಗಾರರ ಶೂ ಕ್ಲೀನ್ ಮಾಡಿದ ಕನ್ನಡಿಗ ರಘು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ