ಬೆಂಗಳೂರು: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಅವರು ಬೆಂಗಳೂರಿನ ಎನ್ಸಿಎ ಶಿಬಿರದಲ್ಲಿ ಅಂಡರ್-16 ಆಟಗಾರರಿಗೆ ಕ್ರಿಕೆಟ್ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ಪಂತ್ ಅವರು ಅಂಡರ್-16 ಆಟಗಾರರಿಗೆ ಸಲಹೆ ನೀಡುತ್ತಿರುವ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಪಂತ್ ಅವರು ಶಸ್ತ್ರಚಿಕಿತ್ಸೆ ಬಳಿಕ ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಫಿಟ್ನೆಸ್ ಮತ್ತು ಪುನಶ್ಚೇತನದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಗೆಗೆ ಪಂತ್ ಮೊದಲ ಬಾರಿಗೆ ಊರುಗೋಲು ಇಲ್ಲದೆ ನಡೆದಾಡಿದ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಭವಿಷ್ಯದಲ್ಲಿ ಟೀಮ್ ಇಂಡಿಯಾ ಪರ ಆಡುವ ಕನಸು ಕಾಣುತ್ತಿರುವ ಅಂಡರ್-16 ಆಟಗಾರರಿಗೆ ಪಂತ್ ವಿಶೇಷ ಮಾಹಿತಿ ನೀಡಿದ್ದಾರೆ.
ಪಂತ್ ಅವರು ಕ್ರಿಕೆಟ್ನಲ್ಲಿ ಇರುವ ಸವಾಲು, ಆಟದಲ್ಲಿ ತೋರಬೇಕಾದ ನಿಷ್ಠೆ, ಫಿಟ್ನೆಸ್ ಸೇರಿದಂತೆ ಹಲವಾರು ಮಾಹಿತಿ ಮತ್ತು ಸಲಹೆಯನ್ನು ಯುವ ಆಟಗಾರರೊಂದಿಗೆ ಹಂಚಿಕೊಂಡರು. ಪಂತ್ ಅವರ ಈ ನಡೆಗೆ ಬಿಸಿಸಿಐ ಮೆಚ್ಚುಗೆ ವ್ಯಕ್ತಪಡಿಸಿದೆ. ಸದ್ಯ ಪಂತ್ ಅವರ ಚೇತರಿಕೆ ಗಮನಿಸುವಾಗ ಅವರು ವರ್ಷಾಂತ್ಯದಲ್ಲೇ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳುವ ನಿರೀಕ್ಷೆ ಇದೆ.
ಇದನ್ನೂ ಓದಿ Rishabh Pant: ಊರುಗೋಲು ಬದಿಗಿಟ್ಟು ಕೆಜಿಎಫ್ ರಾಕಿ ಭಾಯ್ ಶೈಲಿಯಲ್ಲಿ ನಡೆದಾಡಿದ ರಿಷಭ್ ಪಂತ್; ವಿಡಿಯೊ ವೈರಲ್
2022 ಡಿಸೆಂಬರ್ 30 ರಂದು ಮುಂಜಾನೆ ಪಂತ್ ಅವರು ದಿಲ್ಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಚಲಾಯಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಆದರೆ ರಿಷಭ್ ಪಂತ್ ಅವರು ಪವಾಡ ಸದೃಶ್ಯ ಪಾರಾಗಿದ್ದರು.