ನವದೆಹಲಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ರಿಷಭ್ ಪಂತ್(Rishabh Pant) ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಪಂತ್ ಹಣೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದರಿಂದ, ಆ ಭಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.
“ಪಂತ್ ಅವರಿಗೆ ವೈದ್ಯರು ಪ್ಲಾಸ್ಟಿಕ್ ಸರ್ಜರಿ ಮಾಡಿದ್ದಾರೆ. ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗುತ್ತಿದೆ. ಮೊದಲ ಬಾರಿ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಬಳಿಕ ಡ್ರೆಸಿಂಗ್ ಮಾಡಲಾಗಿದೆ. ಇದೀಗ ಪಂತ್ ಕಣ್ಣು ತೆರೆದು ನೋಡುತ್ತಿದ್ದಾರೆ. ಜತೆಗೆ ಸ್ವಲ್ಪ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬೆನ್ನು ನೋವಿನಿಂದ ಸ್ವಲ್ಪ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಚೇತರಿಕೆ ಕಾಣುವ ವಿಶ್ವಾಸವಿದೆ” ಎಂದು ಶ್ಯಾಮ್ ಶರ್ಮಾ ತಿಳಿಸಿದ್ದಾರೆ.
ಶುಕ್ರವಾರ(ಡಿ.30) ಉತ್ತರಾಖಂಡದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪಂತ್ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು. ಹೆದ್ದಾರಿಯ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಆವರಿಸುವ ಮುನ್ನವೇ ಹೊರಬಂದ ಕಾರಣ ಪಂತ್ ಬದುಕುಳಿದಿದ್ದರು.
ಇದನ್ನೂ ಓದಿ | Rishabh Pant | ಸದ್ಯಕ್ಕಿಲ್ಲ ಪಂತ್ ಏರ್ಲಿಫ್ಟ್; ಡೆಹ್ರಾಡೂನ್ನಲ್ಲೇ ಚಿಕಿತ್ಸೆ ಮುಂದುವರಿಕೆ; ಡಿಡಿಸಿಎ ಸ್ಪಷ್ಟನೆ