Site icon Vistara News

Rishabh Pant | ಪಂತ್ ಈ ವರ್ಷ ಕ್ರಿಕೆಟ್​ ಆಡುವುದು ಅನುಮಾನ! ವೈದ್ಯರು ನೀಡಿದ ಮಾಹಿತಿ ಏನು?

Rishabh Pant

ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಟೀಮ್​ ಇಂಡಿಯಾ ಆಟಗಾರ ರಿಷಭ್​ ಪಂತ್‌(Rishabh Pant) ಚೇತರಿಕೆಗೆ ಕನಿಷ್ಠ 9 ತಿಂಗಳು ಬೇಕಾಗುತ್ತದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ. ಜತೆಗೆ ಪಂತ್​ ಈ ವರ್ಷ ಕ್ರಿಕೆಟ್​ಗೆ ಮರಳುವುದು ಅಸಾಧ್ಯ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ರಿಷಭ್​ ಪಂತ್ 2023ರ ಏಷ್ಯಾಕಪ್‌ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಬಿಸಿಸಿಐ ಗುರುವಾರ ಹೇಳಿತ್ತು. ಜತೆಗೆ ಆಸ್ಪತ್ರೆಯ ವೈದ್ಯರು ಕೂಡ ಪಂತ್​ ಚೇತರಿಕೆಗೆ 6 ತಿಂಗಳು ಸಮಯ ಬೇಕಾಗಬಹುದು ಎಂದು ತಿಳಿಸಿದ್ದರು. ಆದರೆ ಇದೀಗ ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ ಪಂತ್ 2023ರಲ್ಲಿ ಕ್ರಿಕೆಟ್ ಆಡುವುದೇ ಅನುಮಾನ ಎಂದು ಹೇಳಲಾಗಿದೆ.

ಸದ್ಯ ಪಂತ್​ ಮುಂಬಯಿಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಚೇತರಿಕೆ ಕಾಣುತ್ತಿದ್ದಾರೆ. ಪಂತ್​ ಅವರ ಅಸ್ಥಿರಜ್ಜು ತೀವ್ರವಾಗಿ ಗಾಯಗೊಂಡಿರುವುದಾಗಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಪಂತ್​ ಈ ವರ್ಷ ನಡೆಯುವ ಎಲ್ಲ ಕ್ರಿಕೆಟ್​ ಸರಣಿಯಿಂದ ದೂರ ಉಳಿಯುವುದು ಖಚಿತ ಎನ್ನಬಹುದು.

ಸದ್ಯದಲ್ಲೇ ಪಂತ್​ ಗಾಯದ ಬಗ್ಗೆ ಅಧಿಕೃತ ಮಾಹಿತಿ!

ರಿಷಭ್​​ ಪಂತ್‌ರನ್ನು ಸಾಧ್ಯವಾದಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅವರ ಗಾಯದ ಬಗ್ಗೆ ಅಧಿಕೃತವಾಗಿ ವರದಿ ಬರುವವರೆಗೂ ಏನು ಹೇಳಲಾಗದು. ವೈದ್ಯರು ಎಲ್ಲ ರೀತಿಯಲ್ಲಿ ಅವಲೋಕನ ಮಾಡುತ್ತಿದ್ದಾರೆ. ಅವರ ಗಾಯದ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.

ಇದನ್ನೂ ಓದಿ | Rishabh Pant | ರಿಷಭ್​ ಪಂತ್​ ಪುನಶ್ಚೇತನದ ಅವಧಿಯ ಮಾಹಿತಿ ಪ್ರಕಟಿಸಿದ ಮುಂಬಯಿ ವೈದ್ಯರು

Exit mobile version