ಚತ್ತೊಗ್ರಾಮ್ : ಬಾಂಗ್ಲಾದೇಶ ಹಾಗೂ ಭಾರತ ತಂಡಗಳ ನಡುವಿನ ಟೆಸ್ಟ್ ಸರಣಿಯ (INDvsBAN) ಮೊದಲ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಬಾಂಗ್ಲಾದೇಶ ಎರಡನೇ ಇನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 272 ರನ್ ಬಾರಿಸಿದೆ. ಅತಿಥೇಯ ತಂಡದ ಗೆಲುವಿಗೆ ಇನ್ನೂ 241 ರನ್ ಬೇಕಾಗಿದೆ. ಅತ್ತ ಭಾರತ ತಂಡಕ್ಕೆ ನಾಲ್ಕು ವಿಕೆಟ್ ಸಾಕು. ಇವೆಲ್ಲರ ನಡುವೆ ಭಾರತ ತಂಡ ಶನಿವಾರ ಫೀಲ್ಡಿಂಗ್ ವೇಳೆ ಕೆಲವೊಂದು ಎಡವಟ್ಟುಗಳನ್ನು ಮಾಡಿಕೊಂಡಿತು. ಬಾಂಗ್ಲಾದೇಶ ಪಡೆ ಅದರ ಲಾಭವನ್ನೂ ಪಡೆದುಕೊಂಡಿದೆ.
ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಫೀಲ್ಡಿಂಗ್ ಯಡವಟ್ಟಿನಲ್ಲಿ ಪಾಲು ಪಡೆದುಕೊಂಡಿದ್ದಾರೆ. ಅವರು ಎದುರಾಳಿ ತಂಡದ ವಿಕೆಟ್ಕೀಪರ್ ಬ್ಯಾಟರ್ ಮುಷ್ಫಿಕರ್ ರಹೀಮ್ ಅವರ ಸುಲಭ ಕ್ಯಾಚೊಂದನ್ನು ಕೈ ಚೆಲ್ಲುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಅಚ್ಚರಿ ಎಂದರೆ ನಂತರದ ಒಂಬತ್ತು ಎಸೆತಗಳ ಬಳಿಕ ಅದೇ ಬ್ಯಾಟರ್ ಅನ್ನು ಅವರು ಚುರುಕಿನ ಸ್ಟಂಪ್ ಔಟ್ ಮೂಲಕ ಪೆವಿಲಿಯನ್ಗೆ ಕಳುಹಿಸಿದ್ದಾರೆ. ಈ ಮೂಲಕ ಅವರು ಸುಲಭ ಕ್ಯಾಚ್ ಬಿಟ್ಟು ಕಷ್ಟದ ಸ್ಟಂಪ್ ಮಾಡಿದರು ಎಂಬುದಾಗಿ ವಿಮರ್ಶೆ ಮಾಡಿಸಿಕೊಂಡರು.
ಉಮೇಶ್ ಯಾದವ್ ಎಸೆದ ಇನಿಂಗ್ಸ್ನ 87ನೇ ಓವರ್ನಲ್ಲಿ ಕ್ಯಾಚ್ ಬಿಟ್ಟಿದ್ದಾರೆ. ಫಸ್ಟ್ ಸ್ಲಿಪ್ ಕಡೆಗೆ ಮುಷ್ಫಿಕರ್ ಕಳುಹಿಸಿದ್ದ ಚೆಂಡನ್ನು ಹಿಡಿಯುವ ಯತ್ನ ಮಾಡಿದರೂ ಅವರ ಕಾಲಿನ ಚಲನೆ ಸ್ವಲ್ಪ ತಡವಾದ ಕಾರಣ ಚೆಂಡು ಅವರ ಮುಷ್ಟಿ ಸೇರಲಿಲ್ಲ. ಇದು ಭಾರತ ತಂಡಕ್ಕೆ ನಿರಾಸೆ ತಂದಿತು. ಅದರೆ, ನಂತರದ ಓವರ್ನಲ್ಲಿ ಅಕ್ಷರ್ ಪಟೇಲ್ ಎಸೆತಕ್ಕೆ ಅವರು ಸ್ಟಂಪ್ ಮಾಡಿದರು. ಅಕ್ಷರ್ ಅವರ ಎಸೆತವನ್ನು ಎದುರಿಸಲು ಮುಷ್ಫಿಕರ್ ಕ್ರೀಸ್ ಬಿಟ್ಟು ಸ್ವಲ್ಪ ಮುಂದೆ ಚಲಿಸಿದರು. ಇದೇ ಸಮಯಕ್ಕೆ ಕಾಯುತ್ತಿದ್ದ ರಿಷಭ್ ಪಂತ್ ಚೆಂಡು ತಮ್ಮ ಕೈ ಸೇರುತ್ತಿದ್ದಂತೆ ಸ್ಪಂಪ್ ಮಾಡಿದರು. ಅವರು ಸ್ಪಂಪ್ ಮಾಡಿದ ವೇಗ ಮಾಜಿ ವಿಕೆಟ್ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಕ್ಷಿಪ್ರತೆಯನ್ನು ಸ್ಮರಿಸುವಂತೆ ಮಾಡಿತು.
ಅದಕ್ಕಿಂತ ಮೊದಲು 47ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ನೆಲಕ್ಕೆ ಚೆಲ್ಲಿದ್ದ ಕ್ಯಾಚೊಂದನ್ನು ಕಷ್ಟಪಟ್ಟು ಹಿಡಿದು ಕ್ಯಾಪ್ಟನ್ ರಾಹುಲ್ ಅವರಿಂದ ಬೇಷ್ ಎನಿಸಿಕೊಂಡಿದ್ದರು.
ಇದನ್ನೂ ಓದಿ | INDvsBAN | ಕೊಹ್ಲಿ ಮರ್ಯಾದೆ ಕಾಪಾಡಿದ ಪಂತ್; ಕೈ ಮುಗಿದು ಅಭಿನಂದಿಸಿದ ನಾಯಕ