ನವ ದೆಹಲಿ: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಗಾಯದ ಸಮಸ್ಯೆ ಕುರಿತು ಹೊಸ ಮಾಹಿತಿ ಪ್ರಕಟಗೊಂಡಿದೆ. ಇತ್ತೀಚಿನ ವರದಿ ಪ್ರಕಾರ ಈ ಹಿಂದೆ ನಿರ್ಧರಿಸಿದಂತೆ ಅವರು ಇನ್ನೊಂದು ಸರ್ಜರಿಗೆ ಒಳಪಡಬೇಕಾಗಿಲ್ಲ. ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡ ಹೇಳಿದೆ. ರಿಷಭ್ ಅವರು 2022 ರ ಡಿಸೆಂಬರ್ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅಲ್ಲಿಂದ ಅವರು ಕ್ರಿಕೆಟ್ ಆಡುತ್ತಿಲ್ಲ.
ರಿಷಭ್ ಪಂತ್ ಇತ್ತೀಚಿನ ತಿಂಗಳುಗಳಲ್ಲಿ ಅತಿ ವೇಗದಲ್ಲಿ ಗಾಯದ ಸಮಸ್ಯೆಯಿಂದ ಹೊರಕ್ಕೆ ಬರುತ್ತಿದ್ದಾರೆ. ಅವರು ಊರುಗೋಲುಗಳಿಲ್ಲದೆ ನಡೆಯುತ್ತಿರುವುದು ಕಂಡುಬಂದಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 25 ವರ್ಷದ ರಿಷಭ್ ಪಂತ್ ಮೇಲ್ವಿಚಾರಣೆ ಮಾಡುವ ವೈದ್ಯಕೀಯ ತಂಡ ಅವರ ಆರೋಗ್ಯ ಸುಧಾರಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಪಘಾತದಿಂದ ಅವರು ಹಲವು ರೀತಿಯ ಗಾಯಕ್ಕೆ ಒಳಗಾಗಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎನ್ನಲಾಗಿದೆ.
ಅಪಘಾತದ ವೇಳೆ ಪಂತ್ ಅವರ ಅಸ್ಥಿರಜ್ಜಿಗೆ ಪೆಟ್ಟಾಗಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಲಾಗಿತ್ತು. ಜತೆಗೆ ಕ್ರೂಸಿಯೇಟ್ ಲಿಗಮೆಂಟ್ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಇದರಿಂದಾಗಿ ಹಿಂಭಾಗದ ಕ್ರೂಸಿಯೇಟ್ ಲಿಗಮೆಂಟ್ಗೆ ಶಸ್ತ್ರ ಚಿಕಿತ್ಸೆ ಬೇಕಾಗಬಹುದು ಎಂದು ಹೇಳಲಾಗಿತ್ತು. ಆದರೆ ಸದ್ಯದ ವರದಿ ಪ್ರಕಾರ ಆ ಶಸ್ತ್ರಚಿಕಿತ್ಸೆಯ ಅಗತ್ಯ ಅವರಿಗೆ ಇಲ್ಲ.
ಇದನ್ನೂ ಓದಿ : Rishabh Pant: ಅಂಡರ್-16 ಆಟಗಾರರಿಗೆ ಕ್ರಿಕೆಟ್ ಸಲಹೆ ನೀಡಿದ ರಿಷಭ್ ಪಂತ್; ಫೋಟೊ ಹಂಚಿಕೊಂಡ ಬಿಸಿಸಿಐ
ಬಿಸಿಸಿಐ ಅಧಿಕಾರಿಯೊಬ್ಬರು ರಿಷಭ್ ಆರೋಗ್ಯದ ಕುರಿತು ಮಾತನಾಡಿ, 25 ವರ್ಷದ ಆಟಗಾರನ ಚೇತರಿಕೆ ನಿರೀಕ್ಷೆಗಿಂತ ವೇಗವಾಗಿದೆ. ಶೀಘ್ರದಲ್ಲೇ ಮೈದಾನಕ್ಕೆ ಅವರ ಪುನರಾಗಮನವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಿಷಭ್ ಪಂತ್ ಅವರ ಆರೋಗ್ಯದ ಬಗ್ಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅದೃಷ್ಟವಶಾತ್, ಅವರ ಪ್ರಗತಿ ನಿರೀಕ್ಷೆಗಿಂತ ಉತ್ತಮವಾಗಿದೆ. ಅವರಿಗೂ ಇದರಿಂದ ಪ್ರೇರಣೆಯಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.