ನವದೆಹಲಿ: ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಭ್ ಪಂತ್(Rishabh Pant) ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿ, ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೆಹಲಿಯಿಂದ ಉತ್ತರಖಂಡ್‌ನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಂತ್ ತೀವ್ರ ಗಾಯಕ್ಕೆ ತುತ್ತಾಗಿದ್ದಾರೆ. ಇದೀಗ ಅವರ ಚೇತರಿಕೆ ಪಾಕಿಸ್ತಾನ ಕ್ರಿಕೆಟಿಗರು ಹಾರೈಸಿದ್ದಾರೆ.
ರಿಷಭ್ ಪಂತ್ ಗಾಯಗೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಕ್ರಿಕೆಟ್ ಜಗತ್ತಿನಿಂದ ಹಾರೈಕೆಗಳ ಮಹಾಪೂರವೇ ಹರಿದು ಬಂದಿದ್ದು, ಟ್ವೀಟ್ ಮೂಲಕವೇ ಪಂತ್ ಆದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ. ಭಾರತ ತಂಡದ ಬದ್ಧ ವೈರಿ ಪಾಕಿಸ್ತಾನ ತಂಡದ ಕ್ರಿಕೆಟ್ ಆಟಗಾರರೂ ಪಂತ್ ಚೇತರಿಕೆಗೆ ಹಾರೈಸಿದ್ದಾರೆ.
ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂ, “ರಿಷಭ್ ಪಂತ್ ಅವರ ಅಪಘಾತದ ಸುದ್ದಿ ತಿಳಿದು ಆಘಾತವಾಯಿತು. ಯುವ ಕ್ರಿಕೆಟಿಗ ಆದಷ್ಟು ಬೇಗ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.
ಪಾಕ್ ತಂಡ ಬೌಲರ್ ಹಸನ್ ಅಲಿ ಟ್ವಿಟ್ ಮಾಡಿದ್ದು, ಸಹೋದರ ಪಂತ್ ಶೀಘ್ರಗುಣಮುಖರಾಗಿ. ನಿಮ್ಮ ಆರೋಗ್ಯ ಚೇತರಿಕೆಗೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ.
ಉಳಿದಂತೆ ಪಾಕ್ ಕ್ರಿಕೆಟಿಗರಾದ ಶೋಯೆಬ್ ಮಲಿಕ್, ಶೋಯೆಬ್ ಅಖ್ತರ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ರಿಜ್ವಾನ್, ಬಾಬರ್ ಅಜಂ, ಶಾಹಿನ್ ಅಫ್ರಿದಿ ಸೇರಿದಂತೆ ಹಲವು ಪಾಕಿಸ್ತಾನದ ಮಾಜಿ ಮತ್ತು ಹಾಲಿ ಆಟಗಾರರು ಪಂತ್ ಚೇತರಿಕೆಗೆ ಹಾರೈಸಿದ್ದಾರೆ.
ಇದನ್ನೂ ಓದಿ | Rishabh Pant | ಹೊತ್ತಿ ಉರಿಯುತ್ತಿದ್ದ ಕಾರಿನ ಬಳಿಯಿಂದ ರಿಷಭ್ ಪಂತ್ ಪ್ರಾಣ ಉಳಿಸಿದ್ದು ಬಸ್ ಡ್ರೈವರ್!