ಡೆಹ್ರಾಡೂನ್: ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್(Rishabh Pant) ಅವರನ್ನು ದೆಹಲಿಗೆ ಏರ್‌ಲಿಫ್ಟ್ ಮಾಡುವ ಅಗತ್ಯವಿಲ್ಲ. ಅವರು ಡೆಹ್ರಾಡೂನ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಹೇಳಿದ್ದಾರೆ.
ಶುಕ್ರವಾರ ಕಾರು ಅಪಘಾತದಲ್ಲಿ ಗಾಯಗೊಂಡು ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಅವರನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರು ಶನಿವಾರ ಭೇಟಿ ಮಾಡಿದ್ದಾರೆ. ಈ ವೇಳೆ ಪಂತ್ ಆರೋಗ್ಯದ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದಾರೆ. ಪಂತ್ ಉತ್ತಮ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಕಾರಣ ಅವರಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಮುಂದುವರಿಸಲಾಗುತ್ತದೆ ಎಂದು ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ತಿಳಿಸಿದ್ದಾರೆ.
ಡೆಹ್ರಾಡೂನ್‌ಗೆ ಹೊರಡುವ ಮೊದಲು, ಪಂತ್ಗೆ ಹೆಚ್ಚಿನ ಚಿಕಿತ್ಸೆ ಅವಕಶ್ಯಕವಾಗಿದ್ದರೆ ಅವರನ್ನು ಏರ್‌ಲಿಫ್ಟ್ ಮಾಡಲಿದ್ದೇವೆ ಎಂದು ಡಿಡಿಸಿಎ ಹೇಳಿತ್ತು. ಆದರೆ ಪಂತ್ ಅವರನ್ನು ಭೇಟಿಯಾದ ನಂತರ ಹೇಳಿಕೆ ನೀಡಿರುವ ಶ್ಯಾಮ್ ಶರ್ಮಾ, “ಪಂತ್ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ವೈದ್ಯರು ಇಲ್ಲಿನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಜತೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದಾರೆ. ಸದ್ಯಕ್ಕೆ ಪಂತ್ಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ” ಎಂದಿದ್ದಾರೆ.
ಇದನ್ನೂ ಓದಿ | Rishabh Pant | ಪಂತ್ ಆರೋಗ್ಯ ವಿಚಾರಿಸಿದ ಬಾಲಿವುಡ್ ನಟರಾದ ಅನುಪಮ್ ಖೇರ್, ಅನಿಲ್ ಕಪೂರ್