Site icon Vistara News

Rishabh Pant: ಕಮ್​ಬ್ಯಾಕ್​ ಪಂದ್ಯದಲ್ಲೇ ದಾಖಲೆ ಬರೆದ ರಿಷಭ್​ ಪಂತ್​

Rishabh Pant

ಚಂಡೀಗಢ: 15 ತಿಂಗಳ ಬಳಿಕ ಐಪಿಎಲ್‌(IPL 2024) ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ರಿಷಭ್‌ ಪಂತ್‌(Rishabh Pant) ಅವರು ತಮ್ಮ ಕಮ್​ಬ್ಯಾಕ್​ ಪಂದ್ಯದಲ್ಲೇ ಮೈಲುಗಲ್ಲೊಂದನ್ನು ನೆಟ್ಟಿದ್ದಾರೆ. ಐಪಿಎಲ್​ ಕ್ರಿಕೆಟ್​ ಟೂರ್ನಿಯಲ್ಲಿ 400(Rishabh Pant smashes 400th IPL boundary ) ಬೌಂಡರಿಗಳನ್ನು ಪೂರ್ತಿಗೊಳಿಸಿದ್ದಾರೆ.

ಪಂಜಾಬ್‌ನ ಹೊಸ ತವರು ಮುಲ್ಲಾನ್ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್(PBKS v DC)​ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 174 ರನ್​ ಬಾರಿಸಿದೆ. 4ನೇ ವಿಕೆಟ್​ಗೆ ಬ್ಯಾಟಿಂಗ್​ಗೆ ಇಳಿದ ಪಂತ್​ ಅವರು ರಾಹುಲ್ ಚಹರ್ ಓವರ್​ನಲ್ಲಿ ಮಿಡ್ ವಿಕೆಟ್‌ನಲ್ಲಿ ಬಾರಿಸಿದ ಚೆಂಡು ಹರ್ಷಲ್ ಪಟೇಲ್ ಕೈ ಸೇರಿದರೂ ಕೂಡ ಅವರು ಕ್ಯಾಚ್​ ಹಿಡಿಯುವಲ್ಲಿ ವಿಫಲರಾಗಿ ಬೌಂಡರಿ ದಾಖಲಾಯಿತು. ಇದೇ ವೇಳೆ ಪಂತ್​ ಐಪಿಎಲ್​ನಲ್ಲಿ 400 ಬೌಂಡರಿಗಳನ್ನು ಪೂರ್ತಿಗೊಳಿಸಿದ ಸಾಧನೆ ಮಾಡಿದರು.

ಜೀವದಾನ ಪಡೆದರೂ ಕೂಡ ಪಂತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಕೇವಲ 2 ಬೌಂಡರಿಗೆ ಸೀಮಿತರಾಗಿ 18 ರನ್​ಗಳಿಸಿ ಕ್ಯಾಚ್​ ಬಿಟ್ಟ ಹರ್ಷಲ್ ಪಟೇಲ್ ಅವರಿಗೆ ವಿಕೆಟ್​ ಒಪ್ಪಿಸಿದರು. ಪಂತ್​ ಮೈದಾನಕ್ಕೆ ಬರುವ ವೇಳೆ ನೆರದಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಅಭಿಷೇಕ್ ಪೊರೆಲ್ ಅವರು ಅಂತಿಮ ಹಂತದಲ್ಲಿ ಸಿಡಿದು ನಿಂತು ಕೇವಲ 10 ಎಸೆತಗಳಲ್ಲಿ ಅಜೇಯ 32 ರನ್ ಗಳಿಸುವ ಮೂಲಕ ಡೆಲ್ಲಿ ತಂಡದ ಬೃಹತ್​ ಮೊತ್ತಕ್ಕೆ ನೆರವಾದರು.

ಇದನ್ನೂ ಓದಿ IPL 2024: ಉದ್ಘಾಟನಾ ಪಂದ್ಯದಲ್ಲೇ ದಾಖಲೆ ಬರೆದ ಮಹೇಂದ್ರ ಸಿಂಗ್​ ಧೋನಿ

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯದೊಂದಿಗೆ ರಿಷಭ್​ ಪಂತ್ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.​ ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗಿತ್ತು.

Exit mobile version